ಎಕ್ಸಲೆಂಟ್: ನಾಲ್ಕು ಕ್ಷೇತ್ರಗಳಲ್ಲಿ ಅರಳಿದ ಸಸ್ಯ ಶ್ಯಾಮಲಾ-2026ದ ದಿವ್ಯ ಸಂಕಲ್ಪ
Published Date: 19-Jul-2026 Link-Copied
ಮೂಡುಬಿದಿರೆ: ಮರವೆಂದರೆ ಪ್ರಕೃತಿಯ ಮೌನ ಪ್ರಾರ್ಥನೆ; ಅದನ್ನು ನೆಡುವ ಕೈಗಳು ಮಾನವೀಯತೆಯ ಮಹಾಮಂತ್ರ. ಭೂಮಿಗೆ ಹಸಿರು ಹೊದಿಸಿ, ಮುಂದಿನ ಪೀಳಿಗೆಗೆ ಜೀವಸಂಪತ್ತಿನ ಉಡುಗೊರೆ ನೀಡುವ ಮಹೋನ್ನತ ಧ್ಯೇಯದೊಂದಿಗೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ವತಿಯಿಂದ ಪರಿಸರ ಪ್ರೇಮಿ ರಸಿಕ ಅವರ ಪವಿತ್ರ ಸ್ಮರಣಾರ್ಥ ಆಯೋಜಿಸಲಾದ “ಸಸ್ಯ ಶ್ಯಾಮಲಾ–2026” ಸಾವಿರ ಗಿಡಗಳನ್ನು ನೆಡುವ ಹಾಗೂ ಹಂಚುವ ಹಸಿರು ಅಭಿಯಾನವು ಒಂದೇ ದಿನದಲ್ಲಿ ನಾಲ್ಕು ವಿವಿಧ ಪವಿತ್ರ ಕ್ಷೇತ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಪವಿತ್ರ ಕರೀಂಜೆ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಭಕ್ತಿಭಾವ ಮತ್ತು ಪರಿಸರ ಪ್ರಜ್ಞೆಯ ಸಮ್ಮಿಲನದೊಂದಿಗೆ ಜರುಗಿದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿ ಅನುಗ್ರಹ ಸಂದೇಶ ನೀಡಿದರು. “ಪ್ರಕೃತಿಯೇ ಪರಬ್ರಹ್ಮನ ಪ್ರತ್ಯಕ್ಷ ರೂಪ. ಮರವನ್ನು ನೆಡುವುದು ಎಂದರೆ ಮಣ್ಣಿನಲ್ಲಿ ಸಸಿಯನ್ನಲ್ಲ, ಧರ್ಮದ ಬೀಜವನ್ನೇ ಬಿತ್ತುವುದು. ಪ್ರತಿಯೊಂದು ಗಿಡವೂ ದೇವರ ಉಸಿರು, ಪ್ರತಿಯೊಂದು ಮರದ ನೆರಳೂ ದೈವಾನುಗ್ರಹದ ವಿಸ್ತಾರ. ಪರಿಸರ ಸಂರಕ್ಷಣೆ ಇಂದಿನ ಅಗತ್ಯ ಮಾತ್ರವಲ್ಲ; ಅದು ಪ್ರತಿಯೊಬ್ಬರ ಆಧ್ಯಾತ್ಮಿಕ ಹೊಣೆಗಾರಿಕೆಯೂ ಆಗಿದೆ,” ಎಂದು ಸ್ವಾಮೀಜಿಯವರು ಆಶೀರ್ವಚನ ನೀಡಿದರು. ನಾಲ್ಕೂ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರು ಮಾತನಾಡಿ,“‘ಹಸಿರೇ ಉಸಿರಾಗಲಿ… ನೆನಪೇ ಬೆಳಕಾಗಲಿ…’ ಎಂಬ ನಮ್ಮ ಸಂಕಲ್ಪ ಕೇವಲ ಘೋಷಣೆಯಲ್ಲ; ಅದು ಮುಂದಿನ ಪೀಳಿಗೆಗೆ ನೀಡುತ್ತಿರುವ ಜೀವದ ವಾಗ್ದಾನ. ಪರಿಸರವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು. ವಿದ್ಯಾರ್ಥಿಗಳ ಹೃದಯದಲ್ಲಿ ಪರಿಸರ ಪ್ರೀತಿಯ ಬೀಜ ಮೊಳಕೆಯೊಡೆದರೆ, ನಾಳೆಯ ಸಮಾಜ ಹಸಿರಿನ ಸಂಸ್ಕೃತಿಯಿAದ ಸಮೃದ್ಧವಾಗುತ್ತದೆ. ಪ್ರತಿಯೊಬ್ಬರೂ ಒಂದು ಗಿಡವನ್ನು ನೆಟ್ಟು, ಅದನ್ನು ಮರವಾಗಿ ಬೆಳೆಸುವವರೆಗೆ ಪಾಲನೆ ಮಾಡಬೇಕು,” ಎಂದು ಅವರು ಕರೆ ನೀಡಿದರು. ಪವಿತ್ರ ಕ್ಷೇತ್ರಗಳಲ್ಲಿ ಹಸಿರು ಯಜ್ಞದ ಪಯಣ: ಇರ್ವತ್ತೂರು: ಈ ಮಹತ್ವದ ಹಸಿರು ಅಭಿಯಾನಕ್ಕೆ ಕೊಳಕ್ಕೆ ಆದಿನಾಥ ಬಸದಿಯಲ್ಲಿ ಅರ್ಥಪೂರ್ಣ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ ಅವರು ಮಾತನಾಡಿ, ಶಿಕ್ಷಣದ ಜೊತೆಗೆ ಪರಿಸರ ಸಂರಕ್ಷಣೆಯ ಸಂಸ್ಕಾರವನ್ನು ಬೆಳೆಸುತ್ತಿರುವ ಎಕ್ಸಲೆಂಟ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಪ್ರಗತಿಪರ ಕೃಷಿಕ ಸುಭಾಷ್‌ಚಂದ್ರ ಚೌಟ, ಚಂದ್ರರಾಜ ಅಧಿಕಾರಿi, ಧರಣೇಂದ್ರ ಜೈನ್ ಮಾಂಟ್ರಾಡಿ, ಶಕುಂತಳಾ ಜೈನ್ ಬಜಗೋಳಿ ಉಪಸ್ಥಿತರಿದ್ದರು. ಮರ್ಯಾಡಿ: ಮರ್ಯಾಡಿಯ ನಡ್ಯೋಡಿ ದೈವಸ್ಥಾನದ ಪಾವನ ಪರಿಸರದಲ್ಲಿ ಮೂರನೇ ಹಂತದ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಪ್ರಸನ್ನ ಹೆಗ್ಡೆ ಅವರು, ಕಾಲೇಜುಗಳು ಕೇವಲ ಪಠ್ಯದ ಕೇಂದ್ರಗಳಾಗದೆ ಪ್ರಕೃತಿಯ ಪರಮಪಾಠ ಕಲಿಸುವ ಸಂಸ್ಕಾರ ಕೇಂದ್ರಗಳಾಗಬೇಕು ಎಂದು ಎಕ್ಸಲೆಂಟ್ ಸಂಸ್ಥೆಯ ಹೆಜ್ಜೆಯನ್ನು ಪ್ರಶಂಸಿಸಿದರು. ಮಾರೂರು ಖಂಡಿಗೆ ರಾಮದಾಸ ಆಸ್ರಣ್ಣ, ವಿಶ್ವನಾಥ ಕೋಟ್ಯಾನ್, ಉದ್ಯಮಿ ಆರ್. ಕೆ. ಭಟ್ ಉಪಸ್ಥಿತರಿದ್ದರು. ಕಲ್ಲಬೆಟ್ಟು: ಶ್ರೀ ಮಹಾಮಾಯಿ ದೇವಸ್ಥಾನದ ಸನ್ನಿಧಿಯಲ್ಲಿ ನೆರವೇರಿತು. ದೇವಸ್ಥಾನದ ಕೋಶಾಧಿಕಾರಿ ರಮೇಶಚಂದ್ರ ಪಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇವಾಲಯಗಳು ಪ್ರಕೃತಿಯ ಸಂರಕ್ಷಣೆಯ ಸಂಕಲ್ಪ ಮೂಡುವ ಪುಣ್ಯಭೂಮಿಗಳಾಗಬೇಕು ಎಂದರು. ವೇದಿಕೆಯಲ್ಲಿ ದೇವಸ್ಥಾನದ ಅಧ್ಯಕ್ಷ ಸೂರ್ಯ ಭಟ್, ಶಿವಾನಂದ ಪೈ, ಕಾರ್ಯದರ್ಶಿ ಕಮಲಾಕ್ಷ ರಾವ್ ಉಪಸ್ಥಿತರಿದ್ದರು. ಜನಮನ ಸೆಳೆದ ಸಸಿಗಳ ವಿತರಣೆ: ಈ ನಿರಂತರ ಅಭಿಯಾನದ ಅಂಗವಾಗಿ ಮಾವು, ಪೇರಳೆ, ನೆಲ್ಲಿಕಾಯಿ, ನೇರಳೆ, ಬೇವು ಸೇರಿದಂತೆ ಸುಮಾರು ಐವತ್ತು ಬಗೆಯ ಫಲ ಹಾಗೂ ನೆರಳು ನೀಡುವ ಅಪರೂಪದ ಸಸಿಗಳನ್ನು ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು. ನಾಲ್ಕೂ ಕಾರ್ಯಕ್ರಮಗಳಲ್ಲಿ ಸಂಸ್ಥೆಯ ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ, ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವರೂಪ್ ಜೈನ್, ಎನ್.ಎಸ್.ಎಸ್. ಅಧಿಕಾರಿ ಅಶೋಕ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ಶಿಕ್ಷಕಿಯರಾದ ರಂಜಿತಾ, ವಿಮಲಾ, ಹರ್ಷಿತ ಬಂಗೇರ ಸೇರಿದಂತೆ ಸಂಸ್ಥೆಯ ಬೋಧಕ-ಬೋಧಕೇತರ ವೃಂದ, ವಿದ್ಯಾರ್ಥಿಗಳು, ದೇವಸ್ಥಾನದ ಪದಾಧಿಕಾರಿಗಳು ಹಾಗೂ ನೂರಾರು ಪರಿಸರಾಸಕ್ತ ಸಾರ್ವಜನಿಕರು ಭಾಗವಹಿಸಿ ಹಸಿರು ಸಂಕಲ್ಪಕ್ಕೆ ಸಾಕ್ಷಿಯಾದರು.