ಜ. 22-30 : ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
Published Date: 23-Jan-2024 Link-Copied
ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ ಮತ್ತು ನೂತನ ಚಂದ್ರಮಂಡಲ ರಥ ಮತ್ತು ಪಲ್ಲಕ್ಕಿ ಸಮರ್ಪಣೆಯು ಜನವರಿ 22ರಿಂದ ಪ್ರಾರಂಭಗೊಂಡು 30ರವರೆಗೆ ನಡೆಯಲಿದೆ. ಸುಮಾರು 800 ವರ್ಷಗಳ ಇತಿಹಾಸವಿರುವ ಪ್ರಸಿದ್ಧ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದಲ್ಲಿದೆ. ವ್ಯಾಜ್ಯಗಳನ್ನು ಪರಿಹರಿಸಿ, "ತೀರ್ಪು" ನೀಡುವ ಸ್ಥಳವೆಂದೇ ಪ್ರತೀತಿ ಪಡೆದು ಮುಂದಕ್ಕೆ "ನ್ಯಾಯತೀರ್ಪು-ನ್ಯಾಯತರ್ಪು" ಎಂದಾಯಿತೆಂದು ಇಲ್ಲಿನ ಇತಿಹಾಸ. ನ್ಯಾಯತರ್ಪು, ಕಳಿಯ ಮತ್ತು ಓಡಿಲ್ನಾಳ ಗ್ರಾಮಗಳಲ್ಲದೆ ಹತ್ತಿರದ ಕಣಿಯೂರು, ಕೊಯ್ಯೂರು, ಕುವೆಟ್ಟು ಮತ್ತು ಮಚ್ಚಿನ ಗ್ರಾಮದ ಆಸುಪಾಸಿಗೂ ಶ್ರೀ ಕ್ಷೇತ್ರದ ವ್ಯಾಪ್ತಿ ಹಬ್ಬಿದೆ. ಊರ-ಪರವೂರಿನ ಭಕ್ತವೃಂದದ ಪರಿಶ್ರಮದಿಂದ ಶ್ರೀ ಕ್ಷೇತ್ರವು ಜೀರ್ಣೋದ್ಧಾರಗೊಂಡು, 2002ರಲ್ಲಿ ಪುನಃಪ್ರತಿಷ್ಠಾ-ಅಷ್ಟಬಂಧ ಬ್ರಹ್ಮಕಲಶದೊಂದಿಗೆ ನವೀಕರಣಗೊಂಡಿದೆ. ಕ್ಷೇತ್ರದ ಅಭಿವೃದ್ಧಿ ಮುಂದಿನ ಹಂತವಾಗಿ ಕ್ಷೇತ್ರದ ದೈವಗಳಾದ ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಗಳಿಗೆ ಮಾಡ್ಯಾರುಗುಡ್ಡೆಯಲ್ಲಿ ದೈವಸ್ಥಾನ ನಿರ್ಮಿಸಿ ಪ್ರತಿಷ್ಠೆ ಮಾಡಲಾಗಿದೆ. 2010ರಲ್ಲಿ ಕ್ಷೇತ್ರದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವಂತೆ ದಾಖಲೆ ಅವಧಿಯಲ್ಲಿ ನೂತನ ರಥ ಸಮರ್ಪಣೆ ಹಾಗೂ ಧ್ವಜಸ್ತಂಭದ ಪ್ರತಿಷ್ಠೆ ನಡೆದಿದೆ. ಈ ಎಲ್ಲ ಕಾರ್ಯಗಳಿಂದ ನಾಳ ಕ್ಷೇತ್ರವು ಅಭಿವೃದ್ಧಿ ಹೊಂದಿ, ಕ್ಷೇತ್ರದ ಸಾನ್ನಿಧ್ಯವು ವೃದ್ಧಿಯಾಗಿ ಹೆಚ್ಚಿನ ಭಕ್ತವೃಂದವನ್ನು ತನ್ನತ್ತ ಸೆಳೆಯುತ್ತಿದೆ. ಜ. 26ರಂದು ಸಂಜೆ 7 ಗಂಟೆಗೆ ಚಂದ್ರಮಂಡಲ ಉತ್ಸವ, 27ರಂದು ಬೆಳಗ್ಗೆ 9 ಗಂಟೆಗೆ ದೇವರ ದರ್ಶನ ಬಲಿ, ರಾತ್ರಿ 8 ಗಂಟೆಗೆ ದೇವರ ಉತ್ಸವ ಬಲಿ ಹೊರಟು, ಕೊಡಮಣಿತ್ತಾಯ ದೈವದ ಗಗ್ಗರ ಸೇವೆ ಮತ್ತು ರಾತ್ರಿ 11 ಗಂಟೆಗೆ ಮಹಾರಥೋತ್ಸವ ನೆರವೇರಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಜಾತ್ರಾ ಮಹೋತ್ಸವಕ್ಕೆ ಮೆರುಗು ನೀಡಲಿದ್ದು, ದಿನಾಂಕ 25ರಂದು ಗುರುವಾರ ರಾತ್ರಿ 8 ಗಂಟೆಗೆ ಮೋಕೆದ ಕಲಾವಿದೆರ್ ಅಭಿನಯಿಸುವ ಸುಟ್ಟು ಸೆಟ್ಯಾರು ವಿರಚಿತ ತುಳು ಹಾಸ್ಯಮಯ ನಾಟಕ “ಕಾಸ್ದ ಕಸರತ್ತ್” ದಿನಾಂಕ 26ರಂದು ರಾತ್ರಿ 9 ಗಂಟೆಗೆ ಉಮೇಶ್ ಮಿಜಾರ್ ಸಾರಥ್ಯದ ನವ ಕಲಾವಿದೆರ್ ಬೆದ್ರ ಅಭಿನಯದ ತುಳು ನಾಟಕ “ಆಕೆ ಪನೊಡಾತೆ” ದಿನಾಂಕ 27ರಂದು ರಾತ್ರಿ 7 ಗಂಟೆಗೆ ಡಾ. ನಯನ ಎ. ಭಟ್ ಗಂಗಾ ನಿಲಯ ಗೇರುಕಟ್ಟೆ ಮತ್ತು ತಂಡದವರಿಂದ ‘ನೃತ್ಯ ವೈಭವ’ ಮತ್ತು ರಾತ್ರಿ 7.30ಕ್ಕೆ ಕಲರ್ಸ್ ಕನ್ನಡ ವಾಹಿನಿಯ ಎದೆತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ಮತ್ತು ತಂಡದವರಿಂದ “ಸಂಗೀತ ಸಂಭ್ರಮ” ದಿನಾಂಕ 28ರಂದು ರಾತ್ರಿ 8 ಗಂಟೆಗೆ ಮಹಾವಿಷ್ಣು ಕಲಾ ತಂಡ ಕಣಿಯೂರು ಇವರಿಂದ ರವಿಶಂಕರ್ ಶಾಸ್ತ್ರೀ ಮಾಣಿಲ ವಿರಚಿತ ತುಳು ನಾಟಕ “ಬುಡ್ದು ಪಾಡೋಡ್ಚಿ” ದಿನಾಂಕ 29ರಂದು ರಾತ್ರಿ 8.30ಕ್ಕೆ ಗಂಟೆಗೆ ಊರ ಹವ್ಯಾಸಿ ಕಲಾವಿದರಿಂದ ರವಿಚಂದ್ರ ಬಿ. ಸಾಲ್ಯಾನ್ ವಿರಚಿತ ತುಳು ಸಾಮಾಜಿಕ ನಾಟಕ “ಅಣ್ಣಡ ತಾಂಟೊರ್ಚಿ” ದಿನಾಂಕ 30ರಂದು ರಾತ್ರಿ 7ಕ್ಕೆ “ಪಾಪಣ್ಣ ವಿಜಯ ಗುಣ ಸುಂದರಿ” ಎಂಬ ಪ್ರಸಂಗವನ್ನು ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮತ್ತು ಊರ ಹವ್ಯಾಸಿ ಕಲಾವಿದರು ಆಡಿ ತೋರಿಸಲಿದ್ದಾರೆ. ಹೀಗೆ ದಿನಂಪ್ರತಿ ಎಲ್ಲಾ ಕಾರ್ಯಕ್ರಮಗಳು ನೆರವೇರಲಿದೆ.