Article Image

ಎಕ್ಸಲೆಂಟ್: ಅಂತರಾಷ್ಟ್ರೀಯ ಯೋಗ ದಿನಾಚರಣೆ

Article Image

ಎಕ್ಸಲೆಂಟ್: ಅಂತರಾಷ್ಟ್ರೀಯ ಯೋಗ ದಿನಾಚರಣೆ

ಯೋಗ ಎಂದರೆ ದೇಹ ಮನಸ್ಸುಗಳ ಚೈತನ್ಯದ ಶಕ್ತಿ. ಇದು ಮನುಷ್ಯನನ್ನು ಉಲ್ಲಾಸದಾಯಕನನ್ನಾಗಿ ಮಾಡುತ್ತದೆ. ಪ್ರತಿನಿತ್ಯ ಯೋಗದ ಅಭ್ಯಾಸ ಇಟ್ಟುಕೊಳ್ಳಬೇಕು. ಅದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಆರೋಗ್ಯಕ್ಕೆ ಯೋಗವೇ ಭಾಗ್ಯ ಇಂದು ಪ್ರಪಂಚದಾದ್ಯಂತ ಜನರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಿದ್ದಾರೆ. 'ನಮಗಾಗಿ ಹಾಗೂ ಸಮಾಜಕ್ಕಾಗಿ ಯೋಗ' ಎನ್ನುವುದು ಈ ವರ್ಷದ ಥೀಮ್ ಆಗಿದೆ. ಯೋಗವು ವೈಯಕ್ತಿಕ ಆರೋಗ್ಯ ಮಾತ್ರವಲ್ಲದೇ ಸಾಮಾಜಿಕ ಯೋಗಕ್ಷೇಮಕ್ಕೂ ಕೊಡುಗೆ ನೀಡುತ್ತದೆ. ಇದು ವೈಯಕ್ತಿಕ ಮತ್ತು ಸಾಮಾಜಿಕ ಆರೋಗ್ಯದ ಸಂಬಂಧವನ್ನು ಒತ್ತಿ ಹೇಳುತ್ತದೆ. ಆದ್ದರಿಂದ ಯೋಗ ಜೀವನಕ್ಕೆ ಬಹು ಮುಖ್ಯವಾಗಿ ಬೇಕಾಗಿದೆ ಎಂದು ಮಸ್ಕತ್ ನ ಓಮನ್‌ನಲ್ಲಿ ಯೋಗ ತರಬೇತುದಾರರಾಗಿರುವ ಜಗದೀಶ್ ಬಂಗೇರ ಅವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಎನ್‌ಸಿ, ಎನ್‌ಎಸ್‌ಎಸ್, ರೇಂಜರ್ ರೋವರ್, ರೆಡ್ ಕ್ರಾಸ್ ಘಟಕಗಳ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಯೋಗ ನಮ್ಮ ಭಾರತದ ಸಂಸ್ಕ್ರತಿಯಾಗಿದೆ, ಸಂಸ್ಕಾರವಾಗಿದೆ. ಋಷಿ ಮುನಿಗಳಿಂದ ಬಳುವಳಿಯಾಗಿ ಬಂದಿರುವ ಯೋಗದ ಅಭ್ಯಾಸ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ದಿನಂಪ್ರತಿ ನಮ್ಮ ಜೀವನದಲ್ಲಿ ಅದು ಒಂದು ಭಾಗವಾಗಬೇಕು. ಯೋಗ ಧ್ಯಾನದಿಂದ ಬದುಕು ಸುಂದರವಾಗಿ ರೂಪಿತಗೊಳ್ಳುತ್ತದೆ. ಅಂತಹ ಯೋಗದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಎಂದರು. ಸಂಸ್ಕ್ರತಿ ಯೋಗ ತಂಡ ಮಸ್ಕತ್ ಓಮನ್ ಇಲ್ಲಿನ ಶ್ವೇತ ಪ್ರಭು, ವೀಣಾ ರೋಹಿತ್ ಕುಮಾರ್, ರವಿ ಪ್ರಕಾಶ್ ಭಟ್ ತರಬೇತುದಾರರಾಗಿ ಆಗಮಿಸಿ ವಿದ್ಯಾರ್ಥಿಗಳಿಂದ ಯೋಗದ ಸರ್ವ ಆಸನಗಳನ್ನು ಪ್ರದರ್ಶನ ಮಾಡಿಸಿದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಾದ ಸುರೇಶ್, ಎನ್‌ಸಿಸಿ ಅಧಿಕಾರಿ ಮಹೇಂದ್ರ ಕುಮಾರ್ ಜೈನ್, ಎನ್‌ಎಸ್‌ಎಸ್ ಅಧಿಕಾರಿ ತೇಜಸ್ವಿ ಭಟ್, ರೇಂಜರ‍್ಸ್ ರೋವರ‍್ಸ್ ಅಧಿಕಾರಿಗಳಾದ ಸಂಧ್ಯಾ ಹಾಗೂ ಪ್ರದೀಪ್ ಹಾಗೂ ರೆಡ್ ಕ್ರಾಸ್ ಅಧಿಕಾರಿ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ಎಕ್ಸಲೆಂಟ್ ಸೆಂಟ್ರಲ್ ಶಾಲೆಯ ಶೈಕ್ಷಣಿಕ ಸಂಯೋಜಕ ಪ್ರಸಾದ ಅತಿಥಿಗಳನ್ನು ಪರಿಚಯಿಸಿದರು, ವಿದ್ಯಾರ್ಥಿನಿ ಸುಧಾಶ್ರೀ ಕಾರ್ಯಕ್ರಮ ನಿರೂಪಿಸಿದರು. ದೈವಿಕ್ ಸ್ವಾಗತಿಸಿದರು ಯಶಸ್ವಿನಿ ವಂದಿಸಿದರು. ವಿದ್ಯಾರ್ಥಿಗಳಿಂದ ಯೋಗದ ಕುರಿತಾದ ವೈವಿಧ್ಯಮಯ ನೃತ್ಯ ನಡೆಯಿತು.

ಸತ್ತೂರು, ಧಾರವಾಡ: ಅಂತರಾಷ್ಟ್ರಿಯ ಯೋಗ ದಿನಾಚರಣೆ

Article Image

ಸತ್ತೂರು, ಧಾರವಾಡ: ಅಂತರಾಷ್ಟ್ರಿಯ ಯೋಗ ದಿನಾಚರಣೆ

ಎಸ್.ಡಿ.ಎಂ. ವಿಶ್ವವಿದ್ಯಾಲಯವು ಅಂತರಾಷ್ಟ್ರಿಯ ಯೋಗ ದಿನಾಚರಣೆಯನ್ನು “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬ ಧ್ಯೇಯೆಯೊಂದಿಗೆ ದಿನಾಂಕ 21 ಜೂನ್ ರಂದು ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಮುಖ್ಯ ಅತಿಥಿಗಳಾಗಿದ್ದು, ಮತ್ತಿತರ ಗಣ್ಯರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಡಿ.ಎಂ. ಪ್ರಕೃತಿ ಮತ್ತು ಯೋಗ ಚಿಕಿತ್ಸಾ ಘಟಕದ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ ಅರಳಿಹಳ್ಳಿ ಅವರು ಯೋಗದ ಮಹತ್ವ ತಿಳಿಸಿ ಅತಿಥಿ ಭಾಷಣ ಮಾಡುತ್ತಾ: ಯೋಗದಿಂದ ನಮ್ಮ ಆತ್ಮ ಸರ್ವೋಚ್ಛವಾಗುತ್ತದೆ. ಯೋಗದಿಂದ ಮನಸ್ಸಿಗೆ ಸುಖ ಮತ್ತು ಶಾಂತಿ ಸಿಗುತ್ತದೆ. ಯೋಗವು ಸಮಗ್ರ ದೇಹವನ್ನು ಸಮತೋಲನದಲ್ಲಿರಿಸುತ್ತದೆ. ಅಷ್ಟಾಂಗ ಯೋಗವು ಜೀವನದಲ್ಲಿ ಪರಿಪೂರ್ಣತೆಯನ್ನು ಗಳಿಸಲು ಸಹಾಯ ಮಾಡುತ್ತದೆ ಎಂದರು. ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಯೋಗ ಪರಿಣಿತರಾದ ಡಾ. ಸತೀಶ ಪಾಟೀಲ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯೋಗ ತಜ್ಞರ ತಂಡವು ವಿಶೇಷ ಆಸನಗಳನ್ನು ಪ್ರದರ್ಶಿಸಿದರು. ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಡಾ. ನಿರಂಜನ್ ಕುಮಾರ ಅವರು ಯೋಗ ತಜ್ಞರ ತಂಡವನ್ನು ಶ್ಲಾಘಿಸಿ, ಸನ್ಮಾನಿಸಿದರು. ಎಸ್.ಡಿ.ಎಂ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಲರಾಮ ನಾಯ್ಕ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಕೃತಿಕಾ ಗುತ್ತಲ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಕಿರಣ ಕುಮಾರ ಅವರು ವಂದನಾರ್ಪಣೆ ಸಲ್ಲಿಸಿದರು.

ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ

Article Image

ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ

ಉಜಿರೆ: ದೈಹಿಕ ಹಾಗೂ ಮಾನಸಿಕ ಸಮತೋಲನದೊಂದಿಗೆ ಆರೋಗ್ಯಭಾಗ್ಯ ಕಾಪಾಡಲು ಎಲ್ಲರೂ ನಿತ್ಯವೂ ಯೋಗಾಭ್ಯಾಸ ಮಾಡಬೇಕು. ಯೋಗಾಭ್ಯಾಸಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಹತ್ತನೆ ವಿಶ್ವ ಯೋಗ ದಿನ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತಕ್ಕೆ ವಿದೇಶಗಳಿಂದ ಔಷಧಿ ಆಮದು ಮಾಡುತ್ತೇವೆ. ವಿದೇಶಗಳಿಗೆ ಭಾರತದಿಂದ ಔಷಧಿ ರಹಿತ ಯೋಗವನ್ನು ರಫ್ತು ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ಜಾಗತಿಕಮಟ್ಟದಲ್ಲಿ ಯೋಗದ ಮಹತ್ವ ಪ್ರಚಾರವಾಗಿದ್ದು ಎಲ್ಲರೂ ಆಸಕ್ತಿ ಮತ್ತು ಕುತೂಹಲದಿಂದ ಯೋಗಾಭ್ಯಾಸ ಮಾಡುತ್ತಿದ್ದಾರೆ. ಯೋಗ ಮತ್ತು ಆಧ್ಯಾತ್ಮದ ತಾತ್ವಿಕ ನೆಲೆಯಲ್ಲಿ ಭಾರತ ವಿಶ್ವಗುರುವಿನ ಮಾನ್ಯತೆ ಹೊಂದಿದೆ. ಧರ್ಮಸ್ಥಳದ ಶಾಂತಿವನಟ್ರಸ್ಟ್ ನೇತೃತ್ವದಲ್ಲಿ ಧರ್ಮಸ್ಥಳ, ಮಣಿಪಾಲದ ಬಳಿ ಪರೀಕ್ಷಾ ಮತ್ತು ಬೆಂಗಳೂರಿನ ನೆಲಮಂಗಲದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪ್ರಾರಂಭಿಸಿ ಆರೋಗ್ಯಭಾಗ್ಯ ರಕ್ಷಣೆಗೆ ಪ್ರೋತ್ಸಾಹ, ಪ್ರೇರಣೆ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ ಎಂದರು. ಮೈಸೂರಿನ ಕುಮಾರಿ ಖುಷಿ ಯೋಗ ಪ್ರಚಾರದಲ್ಲಿ ಮಾಡಿದ ಸಾಧನೆಗೆ ಹೆಗ್ಗಡೆಯವರು ಅಭಿನಂದಿಸಿದರು. ಬೆಂಗಳೂರಿನ ಪರಿಮಳ ಆರೋಗ್ಯ ಸೇವಾಕೇಂದ್ರದ ಡಾ. ಜೋಸ್ ಎಬ್‌ನಜೀರ್ ಮತ್ತು ತುಮಕೂರಿನ ಸಿದ್ದಾರ್ಥ ಉನ್ನತ ಶಿಕ್ಷಣ ಅಕಾಡೆಮಿ ಉಪಕುಲಪತಿ ಡಾ. ಕೆ. ಬಿ. ಲಿಂಗೇಗೌಡ ಶುಭಾಶಂಸನೆ ಮಾಡಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆಯುರ್ವೇದ, ಪ್ರಕೃತಿಚಿಕಿತ್ಸೆ ಮತ್ತು ಯೋಗವಿಜ್ಞಾನಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ಶ್ಲಾಘಿಸಿದರು. ಯೋಗಪ್ರಚಾರದಲ್ಲಿ ವಿಶೇಷ ಸೇವೆ-ಸಾಧನೆ ಮಾಡಿದ ಮೈಸೂರಿನ ಕುಮಾರಿ ಖುಷಿ, ಎಚ್. ಅವರಿಗೆ “ಯೋಗರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುಮಾರಿ ಖುಷಿ ಎಚ್. ಯೋಗ ಪ್ರಾತ್ಯಕ್ಷಿಕೆ ನೀಡಿದರು. ಯೋಗ ಸಾಧಕರಾದ ಅಶ್ವತ್ ಹೆಗಡೆ ಮತ್ತು ಡಾ. ಅಚ್ಯುತ ಈಶ್ವರನ್ ಅವರನ್ನು ಗೌರವಿಸಲಾಯಿತು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭ ಹಾರೈಸಿದರು. ಕೆನರಾ ಬ್ಯಾಂಕ್‌ನ ಮಹಾಪ್ರಬಂಧಕ ಸುಧಾಕರ ಕೊಟ್ಟಾರಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ, ಡಾ. ಶಶಿಕಾಂತ್ ಜೈನ್ ಮತ್ತು ಡಾ. ಸುಜಾತ ಉಪಸ್ಥಿತರಿದ್ದರು. ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು. ಕುಮಾರಿ ಅನನ್ಯಾ ಜೈನ್ ಮತ್ತು ಡಾ. ಕೃತಿಕಾ ರಾಮಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಕೃತಿ ಚಿಕಿತ್ಸೆ-ಯೋಗ ವಿಜ್ಞಾನ ವಿದ್ಯಾರ್ಥಿಗಳಿಂದ ಯೋಗ

Article Image

ಪ್ರಕೃತಿ ಚಿಕಿತ್ಸೆ-ಯೋಗ ವಿಜ್ಞಾನ ವಿದ್ಯಾರ್ಥಿಗಳಿಂದ ಯೋಗ

ಮೂಡುಬಿದಿರೆ: ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವತಿಯಿಂದ ಮಿಜಾರು ಶೋಭಾವನದ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಈ ಬಾರಿಯ ಯೋಗ ದಿನಾಚರಣೆ ಧ್ಯೇಯ-“ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಅಡಿಯಲ್ಲಿ ಕಾಲೇಜಿನ 400ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗಾಸನ ಮಾಡಿದರು. ಯೋಗ ಪ್ರೋಟೋಕಾಲ್ ನಿಯಮಾವಳಿ ಅನುಸಾರವಾಗಿ ತಾಡಾಸನ, ವೃಕ್ಷಸಾನ, ತ್ರಿಕೋನಾಸನ, ಅರ್ಧಚಕ್ರಾಸನ, ಇನ್ನಿತರ ಆಸನ ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನಾಚರಣೆ ನೆರವೇರಿತು. ವಿದ್ಯಾರ್ಥಿ ಸ್ಫೂರ್ತಿ ಮೊಯ್ಲಿ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಭಾಗದ ವಿದ್ಯಾರ್ಥಿಗಳಿಗೆ ಯೋಗ ದಿನಾಚರಣೆಯ ಪ್ರಯುಕ್ತ ಪೋಸ್ಟರ್ ತಯಾರಿಕೆ, ವಿಡೀಯೋ ತಯಾರಿಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ, ಯೋಗ ವಿಭಾಗದ ಡೀನ್ ಡಾ. ಅರ್ಚನಾ ಇದ್ದರು. ವಿಭಾಗದ ವಿದ್ಯಾರ್ಥಿಗಳು ನೆರೆಹೊರೆಯ ಶಾಲಾ-ಕಾಲೇಜುಗಳಲ್ಲಿ ಕಳೆದ 10 ದಿನಗಳು ಯೋಗ ತರಬೇತಿಯನ್ನು ಉಚಿತವಾಗಿ ನಡೆಸಿಕೊಟ್ಟರು. ಪುರಭವನ: ಆಳ್ವಾಸ್ ಶಿಕ್ಷಣ ಸಂಸ್ಥೆಯ 50 ವಿದ್ಯಾರ್ಥಿಗಳು ಜಿಲ್ಲಾ ಆಯುಷ್ ವಿಭಾಗವು ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾದರು.

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನ ಕಾರ್ಯಕ್ರಮ

Article Image

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನ ಕಾರ್ಯಕ್ರಮ

ಪ್ರತಿಯೊಬ್ಬರಲ್ಲಿಯೂ ತಮ್ಮದೇ ಪ್ರತಿಭೆಗಳಿರುತ್ತದೆ. ನಿಮಗೆ ಸಿಗುವ ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬೇಡಿ. ಕೌಶಲ್ಯಕ್ಕೆ ಪ್ರತಿಭೆಗೆ ಯಾವುದೇ ಮಿತಿಯಿಲ್ಲ. ಕಳೆದುಕೊಂಡ ಅವಕಾಶಗಳು ಮತ್ತೊಮ್ಮೆ ಸಿಗುವುದಿಲ್ಲ. ನಿಮ್ಮೊಳಗಿರುವ ಕೌಶಲ್ಯವನ್ನು ಗುರುತಿಸಿಕೊಳ್ಳಿ. ಸಮಾಜವನ್ನು ಬದಲಾಯಿಸುವ ಶಕ್ತಿ ವಿದ್ಯೆಗಿದೆ. ಯುಪಿಎಸ್‌ಸಿ, ಐಎಎಸ್, ಐಪಿಎಸ್ ನಂತಹ ಕನಸುಗಳನ್ನು ನೀವು ಕಾಣಬೇಕು. ನಿಮಗೆ ಕಲಿಸಿದ ಗುರುಗಳು ಎದ್ದು ನಿಂತು ನಿಮಗೆ ಗೌರವ ಕೊಡುವಂತಹ ರೀತಿಯಲ್ಲಿ ಸಾಧನೆಯನ್ನು ಮಾಡಬೇಕು. ಜೀವನದಲ್ಲಿ ಯಾವತ್ತಿಗೂ ನಿರಾಶರಾಗಬೇಡಿ ಬದುಕು ನಿರಂತರವಾಗಿ ಸಾಗುವ ನದಿ ಇದ್ದ ಹಾಗೆ. ಜೀವನದಲ್ಲಿ ಸತತ ಪ್ರಯತ್ನ, ಅಭ್ಯಾಸ, ಭರವಸೆಯೊಂದಿದ್ದರೆ ಒಂದಲ್ಲಾ ಒಂದು ದಿವಸ ನೀವು ಸಾಧಕರಾಗಿ ಗುರುತಿಸಿಕೊಳ್ಳುತ್ತೀರಿ ಆದ್ದರಿಂದ ನಿಮ್ಮ ಮೇಲೆ ನಿಮಗೆ ಸಂಪೂರ್ಣ ಭರವಸೆ ಇರಲಿ ಎಂದು ಖ್ಯಾತ Daijiworld 24x7 Media Network ನ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ ಇವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು. ಪ್ರತಿಭೆ ದೇವರು ನೀಡಿರುವ ಕೊಡುಗೆ. ನಿಮ್ಮಲ್ಲಿ ನಿಮಗೆ ಭರವಸೆ ಇರುವವರೆಗೆ ನಿಮಗೆ ಯಾವತ್ತೂ ಸೋಲಾಗುವುದಿಲ್ಲ. ನಿಮ್ಮಲ್ಲಿರುವ ಪ್ರತಿಭೆಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಅನಾವರಣಗೊಳಿಸಿ ಎಂದು ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ಹೇಳಿದರು. ಶಿಕ್ಷಣವೆಂದರೆ ಕೇವಲ ಪುಸ್ತಕ ಓದಿ ರ‍್ಯಾಂಕ್ ಪಡೆಯುವುದಲ್ಲ ಅದು ವಿಶಾಲ ವ್ಯಾಪ್ತಿಯನ್ನು ಒಳಗೊಂಡಿದೆ. ಮಗುವನ್ನು ಅತ್ಯುತ್ತಮ ಮಾನವನನ್ನಾಗಿಸುವ ಶಕ್ತಿ ಶಾಲೆಗಿದೆ. ರ‍್ಯಾಂಕ್ ಪಡೆಯುವ ಜೊತೆಗೆ ಒಳ್ಳೆಯ ಮೌಲ್ಯಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಸಾಧಕರೆನಿಸಿಕೊಂಡಿರುವವರೆಲ್ಲ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರು ನಿಮಗೆ ಮಾದರಿಯಾಗಲಿ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿ ಮೂಡುಬಿದಿರೆಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರುಪಾಕ್ಷಪ್ಪ ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಜೀವನವನ್ನು ಬದಲಾಯಿಸುವ ಶಕ್ತಿ ಕಲೆಗಿದೆ. ಕಲೆ ಮನುಷ್ಯನ್ನು ಯಾವತ್ತೂ ಕೈ ಬಿಡುವುದಿಲ್ಲ ಜೀವನದಲ್ಲಿ ಪ್ರಶಸ್ತಿಯನ್ನು ಪಡೆದುಕೊಳ್ಳುವುದು ಮುಖ್ಯವಲ್ಲ ಅವಕಾಶಗಳನ್ನು ಬಳಸಿಕೊಳ್ಳುವುದು ಮುಖ್ಯ. ಓದಿನ ಜೊತೆಗೆ ಇನ್ನಿತರ ಕಲಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಎಷ್ಟು ಕಲಿಯಲು ಸಾಧ್ಯವೋ ಅಷ್ಟನ್ನು ಕಲಿತುಕೊಳ್ಳಿ ನಮ್ಮಲ್ಲಿ ಏನು ಇಲ್ಲ ಎಂದು ಬೇಸರದ ಬದುಕನ್ನು ಬದುಕಬೇಡಿ. ನಿಮ್ಮಲ್ಲಿರುವ ಆಸಕ್ತಿ ಕ್ಷೇತ್ರದಲ್ಲಿ ಅಭ್ಯಾಸ ಮುಂದುವರೆಸಿ ನಿಮ್ಮಿಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಿ. ಸಮಾಜದಲ್ಲಿ ನಿಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶಗಳು ಸಿಗುತ್ತಲೇ ಇರುತ್ತವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳ ತರಬೇತುದಾರರಾದ ರಶ್ಮಿತಾ-ಭರತನಾಟ್ಯ, ಸರ್ಪಾಜ್-ಕರಾಟೆ, ಸೌಂದರ್ಯ-ಚೆಸ್, ರೂಪೇಶ್ ಕುಮಾರ್-ನೃತ್ಯ, ಪೂರ್ಣಿಮಾ ಗೋರೆ-ಸಂಗೀತ, ಮಹವೀರ ಪಾಂಡಿ-ಯಕ್ಷಗಾನ, ಚಂದ್ರಶೇಖರ ಆಚಾರ್ಯ-ಚೆಂಡೆ, ಗೌರಿಪ್ರಸಾದ್-ತಬಲ, ಬಾಸ್ಕರ್ ನೆಲ್ಯಾಡಿ-ಚಿತ್ರಕಲೆ, ಚೇತನ ಶೆಟ್ಟಿ- ಕ್ರಾಪ್ಟ್ ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಾದ ಸುರೇಶ್, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ| ಸಂಪತ್ ಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಿರು ವಯಸ್ಸಿನಲ್ಲಿಯೇ ಸರ್ವಕಲಾ ಪ್ರಕಾರಗಳಲ್ಲಿ ಸಾಧನೆಗೈದ ಬೆಳುವಾಯಿಯ ಶುಭಾಂಜನ ಭಟ್ ಇವರನ್ನು ಗೌರವಿಸಿ ಸಂಮಾನಿಸಲಾಯಿತು. ಕರಾಟೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಸಂಸ್ಥೆಯ ವಿದ್ಯಾರ್ಥಿ ಸುಮಿತ್ ಹಾಗೂ ಕರಾಟೆ ತರಬೇತುದಾರರಾದ ಸರ್ಫಾಜ್ ಇವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು. ಉಪಮುಖ್ಯೋಪಾಧ್ಯಾಯರಾದ ಜಯಶೀಲ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸಾನಿಧ್ಯಾ ರಾವ್ ಸನ್ಮಾನಿತರನ್ನು ಪರಿಚಯಿಸಿದರು, ಸಂಜಲ ನಿರೂಪಿಸಿದರು, ರಶ್ಮಿತಾ ಸ್ವಾಗತಿಸಿದರು, ಭುವನ ವಂದಿಸಿದರು.

ಬೃಹತ್ ರಕ್ತದಾನ ಶಿಬಿರ

Article Image

ಬೃಹತ್ ರಕ್ತದಾನ ಶಿಬಿರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಹಳೆ ವಿದ್ಯಾರ್ಥಿ ಸಂಘ, ಎಸ್.ಡಿ.ಎಂ. ಐ.ಟಿ.ಐ. ವೇಣೂರು, ಗ್ರಾಮ ಪಂಚಾಯತ್ ಕುಕ್ಕೇಡಿ, ಪದ್ಮಾಂಬ ಸಮೂಹ ಸಂಸ್ಥೆಗಳು ವೇಣೂರು, ಹಾಲು ಉತ್ಪಾದಕರ ಸಹಕಾರಿ ಸಂಘ (ರಿ.) ಕುಕ್ಕೇಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ವೇಣೂರು, ಲಯನ್ಸ್ ಕ್ಲಬ್ ವೇಣೂರು, ಲಯನ್ಸ್ ಕ್ಲಬ್ ಮಂಗಳೂರು, ಫಲ್ಗುಣಿ ಸೇವಾ ಸಂಘ (ರಿ.) ವೇಣೂರು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ. ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯ, ಮಂಜುಶ್ರೀ ಭಜನಾ ಮಂಡಳಿ (ರಿ.) ಕುಂಡದಬೆಟ್ಟು, ಜನಸೇವಾ ಟ್ರಸ್ಟ್ (ರಿ.) ಪಡ್ಡಂದಡ್ಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಕುಕ್ಕೇಡಿ-ನಿಟ್ಟಡೆ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ರಕ್ತದಾನದ ಬೃಹತ್ ಶಿಬಿರವು ವೇಣೂರಿನ ಎಸ್.ಡಿ.ಎಂ ಐಟಿಐ ನಲ್ಲಿ ನಾಳೆ(ಜೂ. 21) ನಡೆಯಲಿದೆ.

ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ ರೆಂಜರ್ಸ್ ಗಳ ಅಭಿನಂದನಾ ಕಾರ್ಯಕ್ರಮ

Article Image

ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ ರೆಂಜರ್ಸ್ ಗಳ ಅಭಿನಂದನಾ ಕಾರ್ಯಕ್ರಮ

ಮೂಡುಬಿದಿರೆ: ಶಿಸ್ತು, ಸಮಯಪ್ರಜ್ಞೆ, ಸೃಜನಶೀಲತೆ, ಕ್ರೀಡಾಮನೋಭಾವ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ಅಪಾರ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ ಮೋಹನ ಆಳ್ವ ಹೇಳಿದರು. ನಗರದ ಸ್ವರಾಜ್ ಮೈದಾನದ ಸ್ಕೌಟ್ಸ್ - ಗೈಡ್ಸ್ ಕನ್ನಡ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡುಬಿದಿರೆ ಸಹಯೋಗದಲ್ಲಿ ನಡೆದ 2023-24 ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾನ್ವಿತ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ ರೆಂಜರ್ಸ್ ಗಳ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ಪಠ್ಯ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳು ಶೈಕ್ಷಣಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿರುವುದು ಅಭಿನಂದನಾರ್ಹ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ, ಪಿ. ಜಿ. ಆರ್. ಸಿಂಧ್ಯಾ ಮಾತನಾಡಿ, ಒಂದು ವಿಶ್ವವಿದ್ಯಾಲಯ ಮಾಡಲಾಗದ ಶೈಕ್ಷಣಿಕ ಕಾರ್ಯವನ್ನು ಮೋಹನ ಆಳ್ವರು ಮಾಡುತ್ತಿದ್ದಾರೆ ಎಂದರು. ಶೈಕ್ಷಣಿಕ ಕಾರ್ಯದ ಜೊತೆಯಲ್ಲಿ ಅಂತರಾಷ್ಟ್ರೀಯ ಜಾಂಬೂರಿ ಆಯೋಜಿಸಿದ್ದ ಕುರಿತು ನೆನೆದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳು ಬಹಳಷ್ಟಿದ್ದಾರೆ ಆದರೆ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ರ‍್ಯಾಂಕ್ ಗಳಿಸಿರುವುದು ಅಭಿನಂದನೀಯ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎಸ್. ವಿರೂಪಾಕ್ಷ ಮಾತನಾಡಿ ಶಿಕ್ಷಣದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಿಸಿಕೊಂಡಾಗ ಸರ್ವತೋಮುಖ ಕಲಿಕೆ ಸಾಧ್ಯ ಎಂದರು. ಉತ್ತಮ ಶಿಸ್ತುಬದ್ಧ ಜೀವನ ರೂಪಿಸುವ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕರಿಸುತ್ತಿದೆ ಎಂದರು. ಆತ್ಮ ವಿಶ್ವಾಸದ ಜೊತೆಗೆ ಮಾನವೀಯ ಗುಣಗಳನ್ನು ಬೆಳೆಸುವಲ್ಲಿ ಈ ಶಿಕ್ಷಣ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ದಕ್ಷಿಣ ಕನ್ನಡ, ಕಾರವಾರ, ಉಡುಪಿ, ಶಿರಸಿ, ಕೊಡಗು ಜಿಲ್ಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್, ರೇಂಜರ್ಸ್ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ ಭಟ್ ವಂದಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ಶ್ರೀಪತಿ ಭಟ್, ಜಿಲ್ಲಾ ಗೈಡ್ಸ್ ಆಯುಕ್ತೆ ವಿಮಲಾ ರಂಗಯ್ಯ, ಜ್ಯೋತಿ ಜೆ. ಪೈ. ಜಿಲ್ಲಾ ಗೈಡ್ ಆಯುಕ್ತೆ ಉಡುಪಿ ಜಿಲ್ಲೆ, ಜಿಲ್ಲಾ ಜೊತೆ ಕಾರ್ಯದರ್ಶಿ ಜಯವಂತಿ ಸೋನ್ಸ್, ಚಂದ್ರಶೇಖರ್ ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತರು, ಶಿರಸಿ ಜಿಲ್ಲೆ, ಸಾವಿತ್ರಿ ಮನೋಹರ್, ALT, ಉಡುಪಿ ಜಿಲ್ಲೆ, ಮೂಡಬಿದಿರೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಭಾರತಿ ನಾಯಕ್ ಉಪಸ್ಥಿತರಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ. ವಿದ್ಯಾರ್ಥಿಗಳ ಅಭಿನಂದನಾ ಪತ್ರಗಳನ್ನು ಘೋಷಿಸಿದರು, ಕಾರ್ಯಕ್ರಮವನ್ನು ನವೀನ್ ಚಂದ್ರ ಅಂಬೂರಿ ನಿರೂಪಿಸಿ, ವಸಂತ್ ದೇವಾಡಿಗ ಸ್ವಾಗತಿಸಿದರು.

ವಿಶ್ವವಿದ್ಯಾಲಯ (ರಾಜ್ಯ) ಮಟ್ಟದ ಪುರುಷರ ಮತ್ತು ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್

Article Image

ವಿಶ್ವವಿದ್ಯಾಲಯ (ರಾಜ್ಯ) ಮಟ್ಟದ ಪುರುಷರ ಮತ್ತು ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್

ಮೂಡುಬಿದಿರೆ: ಕಾಲೇಜು ಮಟ್ಟದಲ್ಲಿ ಕ್ರೀಡೆಗೆ ಪ್ರಾಮುಖ್ಯತೆಯನ್ನು ನೀಡಿದರೆ ಮಾತ್ರ ದೇಶದಲ್ಲಿ ಕ್ರೀಡೆ ಬೆಳೆಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದರು. ಇಲ್ಲಿರುವ ಆಳ್ವಾಸ್ ಕಾಲೇಜಿನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸ್ಮಾರಕ ಶೆಟ್ಟಿ ಸಭಾಂಗಣದಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಆತಿಥ್ಯದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ರಾಜ್ಯ) ಮಟ್ಟದ ಪುರುಷರ ಮತ್ತು ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಅವರು ಮಾತನಾಡಿದರು. ಕ್ರೀಡೆಯನ್ನು ಬೆಳೆಸುವಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೊಡುಗೆ ಅಪಾರ. ಸರ್ಕಾರದ ನೆರವಿಲ್ಲದೆಯೂ ಆಳ್ವಾಸ್ ಸಂಸ್ಥೆ ಕ್ರೀಡಾಪಟುಗಳ ಬೆಳವಣಿಗೆಗೆ ಶ್ರಮ ಪಡುತ್ತಿದೆ. ಈ ಮಾದರಿ ದೇಶದಲ್ಲೇ ಮೊದಲು ಎಂದರು. ಮುಂದಿನ ದಿನಗಳಲ್ಲಿ ನಮ್ಮ ಫೆಡರೇಶನ್ ಕಪ್ ಅನ್ನು ಆಳ್ವಾಸ್‌ನಲ್ಲೆ ನಡೆಸಲಾಗುವುದು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ದೇಶಿಯ ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಂತೋಷ ಉಂಟುಮಾಡಿದೆ. ಆಳ್ವಾಸ್ ಸಂಸ್ಥೆಯೂ ಕ್ರೀಡೆಯ ಪೋಷಣೆ ಹಾಗೂ ಬೆಳವಣಿಗೆಗೆ ಮಹತ್ವವನ್ನು ನೀಡುತ್ತದೆ. ಇದರ ಫಲವಾಗಿ ನಮ್ಮ ಸಂಸ್ಥೆಯಿಂದ 7 ಕ್ರೀಡಾಪಟುಗಳು ಒಲಿಂಪಿಕ್‌ನಲ್ಲಿ ಸ್ಪರ್ಧಿಸಲು ಸಾಧ್ಯವಾಯಿತು ಎಂದರು. ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯ ಕಬಡ್ಡಿ ಟೂರ್ನಿ ಹಾಗೂ ಖೇಲೊ ಇಂಡಿಯಾ ಟೂರ್ನಿಯಲ್ಲಿ ಚಿನ್ನದ ಪದಕ ಗಳಿಸಿದ ಆಳ್ವಾಸ್ ವಿದ್ಯಾರ್ಥಿ ಜಿತಿನ್ ನಾಯ್ಕ್, ಪ್ರೊ ಕಬಡ್ಡಿ ಆಟಗಾರರಾದ ರಂಜಿತ್ ನಾಯ್ಕ್ ಹಾಗೂ ಶಶಾಂಕ್ ಬಿ. ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಪುರುಷೋತ್ತಮ್ ಪೂಜಾರಿ ಹಾಗೂ ರೋಹಿತ್ ತೊಕ್ಕೊಟ್ಟು ಇದ್ದರು. ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ವನಿತಾ ಶೆಟ್ಟಿ ಸ್ವಾಗತಿಸಿ, ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಯತಿ ಕುಮಾರ್ ವಂದಿಸಿ, ವಿದ್ಯಾರ್ಥಿ ಅನಂತಕೃಷ್ಣ ನಿರೂಪಿಸಿದರು. ಈ ಟೂರ್ನಿಯಲ್ಲಿ ಒಟ್ಟು 64 ಪುರುಷರ ಹಾಗೂ 19 ಮಹಿಳಾ ತಂಡಗಳು ಪಾಲ್ಗೊಂಡಿದ್ದು, ಮೂರು ದಿನಗಳ ಕಾಲ ಟೂರ್ನಿ ನಡೆಯಲಿದೆ. ಜೂನ್ 20ರಂದು ಅಂತಿಮ ಹಣಾಹಣಿ ಪಂದ್ಯಗಳು ಹಾಗೂ ಸಮಾರೋಪ ನಡೆಯಲಿದೆ.

‘ಜಗನ್ಮೋಹನ ಹಾಗೂ ಶೋಭಾಯಮಾನ’ ನೂತನ ಕಾಲೇಜು ಸಂಕೀರ್ಣ ಹಾಗೂ ವಸತಿ ನಿಲಯಗಳ ಲೋಕಾರ್ಪಣೆ

Article Image

‘ಜಗನ್ಮೋಹನ ಹಾಗೂ ಶೋಭಾಯಮಾನ’ ನೂತನ ಕಾಲೇಜು ಸಂಕೀರ್ಣ ಹಾಗೂ ವಸತಿ ನಿಲಯಗಳ ಲೋಕಾರ್ಪಣೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ವಿದ್ಯಾಗಿರಿಯ ಜಗಜ್ಯೋತಿ ಬಸವೇಶ್ವರ ವೃತ್ತದ, ಜ್ಞಾನಯೋಗಿ ಸರ್ವಜ್ಞ ಆವರಣದಲ್ಲಿ ನೂತನವಾಗಿ ನಿರ್ಮಾಣವಾದ ಕಾಲೇಜು ಸಂಕೀರ್ಣ ಹಾಗೂ ವಿದ್ಯಾರ್ಥಿನಿ ವಸತಿ ನಿಲಯದ ಉದ್ಘಾಟನಾ ಸಮಾರಂಭ ಜೂ. 17ರಂದು ನಡೆಯಿತು. ನೂತನ ಕಾಲೇಜು ಸಂಕೀರ್ಣ-‘ಜಗನ್ಮೋಹನ’ದ ಉದ್ಘಾಟನೆಯನ್ನು ಕರ್ನಾಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯ, ಉದ್ಯಮಿ ಕೆ. ಶ್ರೀಪತಿ ಭಟ್ ನೆರವೇರಿಸಿದರು. ಡಾ. ಎಂ. ಮೋಹನ ಆಳ್ವರ ಧರ್ಮಪತ್ನಿ ದಿ.ಶೋಭಾ ಆಳ್ವರ ನೆನಪಿಗಾಗಿ ನೂತನ ವಸತಿ ನಿಲಯಕ್ಕೆ ‘ಶೋಭಾಯಮಾನ’ ಎಂದು ಹೆಸರಿಡಲಾಗಿದ್ದು, ಇದರ ಉದ್ಘಾಟನೆಯನ್ನು ಲಲಿತ ರಾಮಣ್ಣ ಶೆಟ್ಟಿ ಮತ್ತು ಜಯಶ್ರೀ ಅಮರನಾಥ್ ಶೆಟ್ಟಿ ನೇರವೇರಿಸಿದರು. ‘ಜಗನ್ಮೋಹನ’ದ ವಿಶೇಷತೆಗಳು: ಅತ್ಯಾಧುನಿಕ ವ್ಯವಸ್ಥೆಯನ್ನೊಳಗೊಂಡ ನೂತನ ಕಾಲೇಜು ಕಟ್ಟಡ -‘ಜಗನ್ಮೋಹನ’ದಲ್ಲಿ 68 ತರಗತಿ ಕೊಠಡಿಗಳಿದ್ದು, 3 ಭೌತಶಾಸ್ತ್ರದ ಲ್ಯಾಬ್, 3 ರಸಾಯಶಾಸ್ತ್ರದ ಲ್ಯಾಬ್ ಹಾಗೂ 2 ಜೀವಶಾಸ್ತ್ರದ ಲ್ಯಾಬ್ ಹಾಗೂ ಒಂದು ಸುಸಜ್ಜಿತ ಕಂಪ್ಯೂಟರ್ ಲ್ಯಾಬ್‌ನ್ನು ಹೊಂದಿದೆ. ವಿಶಾಲವಾದ ಸ್ಟಡಿಹಾಲ್‌ನ್ನು ಹೊಂದಿರುವ ಈ ಕಟ್ಟಡ, ಪ್ರತಿಧ್ವನಿ ಮುಕ್ತ ವ್ಯವಸ್ಥೆಯನ್ನು ಹೊಂದಿದೆ. ಪ್ರಶಾಂತ ಪರಿಸರದ ನಡುವೆ, ವಿಶಾಲವಾದ ಹೂದೋಟ, ಸುಂದರವಾದ ವಾಕಿಂಗ್ ಟ್ರ್ಯಾಕ್, ಕಟ್ಟಡದ ಒಳಭಾಗದಲ್ಲಿ ಅಮೃತಶಿಲೆಯಿಂದ ನಿರ್ಮಿಸಿದ ಭಗವಾನ್ ಮಹಾವೀರರ ಮೂರ್ತಿ ಮನಸ್ಸಿಗೆ ಆಹ್ಲಾದಕರ ವಾತವರಣವನ್ನು ಒದಗಿಸುತ್ತದೆ. ಶೋಭಾಯಮಾನ ವಸತಿ ನಿಲಯ: ಶೋಭಾಯಮಾನ ವಸತಿ ನಿಲಯವು ಆಧುನಿಕ ಕಾಲದ ಎಲ್ಲಾ ವ್ಯವಸ್ಥೆಯನ್ನು ಒಳಗೊಂಡ ಸುಸಜ್ಜಿತ ವಸತಿ ಗೃಹವಾಗಿದೆ. 600 ವಿದ್ಯಾರ್ಥಿನಿಯರಿಗೆ ವಸತಿಯನ್ನು ಒದಗಿಸಬಲ್ಲ ಈ ಹಾಸ್ಟೆಲ್, ಎಲ್‌ ಆಕಾರದಲ್ಲಿ ನಿರ್ಮಾಣಗೊಂಡಿದೆ. ವಿದ್ಯಾರ್ಥಿಗಳ ಅನುಕೂಲಕ್ಕನುಗುಣವಾಗಿ ಹಾಸ್ಟೆಲ್‌ನ ರೂಮ್‌ಗಳನ್ನು ನಿರ್ಮಿಸಲಾಗಿದ್ದು, ಪ್ರತೀ ರೂಮ್ ಅಟ್ಯಾಚೆಡ್ ಬಾತ್‌ರೂಮ್ ವ್ಯವಸ್ಥೆಯನ್ನು ಒಳಗೊಂಡಿದೆ. ಎರಡು ಅತ್ಯಾಕರ್ಷಕ ಡೈನಿಂಗ್ ಹಾಲ್‌ಗಳಿದ್ದು, ಒಂದೇ ಕಿಚನ್‌ನಿಂದ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇಲ್ಲೂ ವಿಶಾಲವಾದ ಸ್ಟಡಿ ಹಾಲ್‌ನ್ನು ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳು ಸದಾ ಕಾಲ ಈ ವ್ಯವಸ್ಥೆಯನ್ನು ಉಪಯೋಗಿಬಹುದಾಗಿದೆ. 24 ಗಂಟೆಗಳ ಸಿಸಿಟಿವಿ ಕಣ್ಗಾವಲಿರುವ ಈ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು, ವೈದ್ಯಕೀಯ ತಂಡ, ಆಪ್ತ ಸಲಹೆಗಾರರು, ವಾರ್ಡನ್‌ಗಳು ಸದಾ ಸೇವೆಯಲ್ಲಿ ನಿರತರಾಗಿರುತ್ತಾರೆ. ಕಾರ‍್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಉದ್ಯಮಿ ಶ್ರೀಪತಿ ಭಟ್, ಮೀನಾಕ್ಷಿ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ್ ಆಳ್ವ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಶಿಕ್ಷಕೇತರ ವೃಂದದವರು ಪಾಲ್ಗೊಂಡಿದ್ದರು.

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ “ಉತ್ಸವ 2024”

Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ “ಉತ್ಸವ 2024”

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ “ಉತ್ಸವ 2024” ಅನ್ನು ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ದಿನಾಂಕ 10ರಂದು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಮತ್ತು ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಕ್ತನ ವಿದ್ಯಾರ್ಥಿ ಮತ್ತು ಬೆಂಗಳೂರಿನ ಖ್ಯಾತ ರೆಡಿಯೋಲಾಜಿಸ್ಟ್ ಆದ ಡಾ. ರೋಹಿತ್ ಮಧುಕರ ಅವರು "ಉತ್ಸವ 2024" ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಮಾರು 20 ವರ್ಷಗಳ ಹಿಂದೆ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತಮ್ಮ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಳ್ಳುತ್ತಾ ಮತ್ತು ಈಗ ಅದರ ಯಶಸ್ಸನ್ನು ಆನಂದಿಸುವುದರೊಂದಿಗೆ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಹೆಮ್ಮೆಯ ಮೊದಲ ಬ್ಯಾಚ್ ಆಗಿದ್ದರಿಂದ ಆಡಳಿತ ಮಂಡಳಿ ಮತ್ತು ಶಿಕ್ಷಕರೇ ನಮಗೆ ಎಲ್ಲವೂ ಆಗಿದ್ದರು. ನಮ್ಮ 2003ನೇ ಬ್ಯಾಚ್ ಹಲವು “ಮೊದಲ” ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದನ್ನು ಸ್ಮರಿಸಿಕೊಂಡರು. ಅಂದಿನ ಅಧ್ಯಾಪಕರು ವಿದ್ಯಾರ್ಥಿಗಳು ತಮ್ಮನ್ನು ಹೇಗೆ ಪೋಷಿಸಿ, ಸಮಾಜಕ್ಕೆ ಉತ್ತಮ ವೈದ್ಯರನ್ನಾಗಿ ರೂಪಿಸಿದ್ದನ್ನು ನೆನಪಿಸಿಕೊಂಡರು. ಉತ್ಸವ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕ್ರೀಯಾಶೀಲತೆಯನ್ನು ಬೆಳೆಸಿ, ಉತ್ತಮ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಎಸ್.ಡಿ.ಎಂ. ಮಹಾವಿದ್ಯಾಲಯವು ಕಳೆದ 20 ವರ್ಷಗಳಲ್ಲಿ ಸಾಧಿಸಿದ ಉತ್ತಮ ಪ್ರಗತಿಗಾಗಿ ಎಸ್.ಡಿ.ಎಂ. ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ತಮ್ಮ ಮುಂದೆ ಇರುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲಿಯೇ ದೊಡ್ಡ ದೊಡ್ಡ ಕನಸುಗಳನ್ನು ಕಾಣಲು ಹಿಂಜರಿಯಬಾರದು. ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ತರುತ್ತಾರೆ ಎಂಬುದನ್ನು ನಂಬಬೇಕು. ಸಾಂಸ್ಕೃತಿಕ ಉತ್ಸವಗಳು ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಅವರಲ್ಲಿ ಹೊಸ ಜ್ಞಾನವನ್ನು ಮೂಡಿಸುತ್ತವೆ ಎಂದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ಉಪ ಪ್ರಾಂಶುಪಾಲರಾದ ಡಾ. ದೀಪಕ ಕಣಬೂರ, ಉಪ ವಿದ್ಯಾರ್ಥಿ ಕಲ್ಯಾಣಾಧಿಕಾರಿಯವರಾದ ಆಶಾ ದೇಶಪಾಂಡೆ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಾಯಿ ಧೀರಾ ಅವರು ವಿದ್ಯಾರ್ಥಿಗಳ ವಾರ್ಷಿಕ ಸಂಚಿಕೆಯಾದ ಸ್ಟಿಲ್‌ವಾಟರ‍್ಸ್ ನ ವಿಶ್ಲೇಷಣೆ ನೀಡಿದರು. ರೋಹಿಣಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಚಂದನ ಅವರು ವಂದನಾರ್ಪಣೆ ಸಲ್ಲಿಸಿದರು.

ಎಕ್ಸಲೆಂಟ್ ಮೂಡುಬಿದಿರೆ: ಜೆಇಇ ಅಡ್ವಾನ್ಸ್ಡ್ ರಾಷ್ಟ್ರಮಟ್ಟದ ಸಾಧನೆ

Article Image

ಎಕ್ಸಲೆಂಟ್ ಮೂಡುಬಿದಿರೆ: ಜೆಇಇ ಅಡ್ವಾನ್ಸ್ಡ್ ರಾಷ್ಟ್ರಮಟ್ಟದ ಸಾಧನೆ

ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಉತ್ಕ್ರಷ್ಟ ಸಾಧನೆಗೈದಿದ್ದಾರೆ. ನಿಶಾಂತ್ ಹೆಗ್ಡೆ ರಾಷ್ಟ್ರ ಮಟ್ಟದಲ್ಲಿ 4349ನೇ ಸ್ಥಾನ (GM), ಚಿರಾಗ್ ಕಂಚಿರಾಯ್ 573ನೇ ಸ್ಥಾನ (C), ಸಾನ್ವಿ ಎಸ್. ಟಿ. 1404ನೇ ಸ್ಥಾನ (C), ಸಂಜಯ್ ಬಿರಾದರ್ 2200ನೇ ಸ್ಥಾನ (C), ಸಚಿನ್ 3023ನೇ ಸ್ಥಾನ (C), ರೋಹನ್ ಎಸ್. 4263ನೇ ಸ್ಥಾನ (C) ಪಡೆದು ಉತ್ತಮ ಸ್ಥಾನಗಳಿಸುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜೆಇಇ ಸಂಯೋಜಕರಾದ ರಾಮಮೂರ್ತಿ, ಹಾಗೂ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಖಾಸಗಿ ಆಸ್ಪತ್ರೆ ಎದುರು ಕೆಪಿಎಂಇ ನೋಂದಣಿ ಫಲಕ ಕಡ್ಡಾಯ

Article Image

ಖಾಸಗಿ ಆಸ್ಪತ್ರೆ ಎದುರು ಕೆಪಿಎಂಇ ನೋಂದಣಿ ಫಲಕ ಕಡ್ಡಾಯ

ನಕಲಿ ವೈದ್ಯರ ಹಾವಳಿ ತಡೆಗಟ್ಟುವ ಉದ್ದೇಶದಿಂದ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಕಡ್ಡಾಯವಾಗಿ ಎಲ್ಲರಿಗೂ ಕಾಣುವ ರೀತಿಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ನೋಂದಣಿ ಸಂಖ್ಯಾ ಫಲಕ ಹಾಕಬೇಕೆಂದು ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಕೆಪಿಎಂಇ ನೋಂದಣಿ ಸಂಖ್ಯೆ, ಆಸ್ಪತ್ರೆ ಹೆಸರು ಮತ್ತು ಮಾಲೀಕರ ಹೆಸರನ್ನೊಳಗೊಂಡ ಫಲಕವನ್ನು ಕಟ್ಟಡದ ಮುಂಭಾಗದಲ್ಲಿ ಪ್ರದರ್ಶಿಸಬೇಕು. ಅಲೋಪತಿ ಆಸ್ಪತ್ರೆಗಳು ಆಕಾಶ ನೀಲಿ ಬಣ್ಣ ಮತ್ತು ಆಯುರ್ವೇದಿಕ್ ಆಸ್ಪತ್ರೆಗಳು ತಿಳಿ ಹಸಿರು ಬಣ್ಣದ ಬೋರ್ಡ್ ಬಳಸುವಂತೆ ಸೂಚಿಸಲಾಗಿದೆ. ಫಲಕ ಅಳವಡಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಈ ನಿಯಮಗಳನ್ನು ಅನುಸರಿಸದ ಖಾಸಗಿ ವೈದ್ಯಕೀಯ ಆಸ್ಪತ್ರೆಗಳ ವಿರುದ್ಧ ಕೆಪಿಎಂಇ ತಿದ್ದುಪಡಿ ಕಾಯಿದೆ 2017ರ ಸೆಕ್ಷನ್ 19(5)ರ ಅನ್ವಯ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಅಥವಾ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ವಿಶ್ವ ತುರ್ತು ಚಿಕಿತ್ಸಾ ದಿನಾಚರಣೆ

Article Image

ವಿಶ್ವ ತುರ್ತು ಚಿಕಿತ್ಸಾ ದಿನಾಚರಣೆ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗದಿಂದ 27 ಮೇ 2024 ರಂದು “ವಿಶ್ವ ತುರ್ತು ಚಿಕಿತ್ಸಾ ದಿನ”ದ ಅಂಗವಾಗಿ “ಅಪಧಮನಿಯ ರಕ್ತದ ಅನಿಲ ವಿಶ್ಲೇಷಣೆಯ ಬಗ್ಗೆ ಪ್ರಾಥಮಿಕ ಜ್ಞಾನ” ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಉತ್ತರ ಕರ್ನಾಟಕದ ವಿವಿಧ ವೈದ್ಯಕೀಯ ಕಾಲೇಜುಗಳಿಂದ ಸುಮಾರು 150ಕ್ಕೂ ಹೆಚ್ಚು ಅಧ್ಯಾಪಕರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗವು ಕರ್ನಾಟಕದಲ್ಲಿ ಸ್ಥಾಪನೆಯಾದ 5 ನೇ ವಿಭಾಗ ಮತ್ತು 2 ನೇ ಅತಿ ದೊಡ್ಡ ವಿಭಾಗವಾಗಿದೆ. ಎಸ್.ಡಿ.ಎಂ ವೈದ್ಯಕೀಯ ಕಾಲೇಜು ಕಳೆದ ಐದು ವರ್ಷಗಳಿಂದ ತುರ್ತು ಚಿಕಿತ್ಸಾ ವಿಭಾಗದಲ್ಲಿ ಎಂ.ಡಿ. ಸ್ನಾತಕೋತ್ತರ ಪದವಿಯನ್ನು ನೀಡುತ್ತಿದೆ. ಡಾ. ನಿರಂಜನ್ ಕುಮಾರ, ಉಪಕುಲಪತಿಗಳು, ಈ ಕಾರ್ಯಾಗಾರವನ್ನು ಉದ್ಘಾಟಿಸಿದರು. ಡಾ. ರತ್ನಮಾಲಾ ಎಂ. ದೇಸಾಯಿ, ಎಸ್.ಡಿ.ಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು, ಡಾ. ವಿಜಯ ಕುಲಕರ್ಣಿ, ಉಪ ಪ್ರಾಂಶುಪಾಲರು, ಡಾ. ಕಿರಣ ಹೆಗ್ಡೆ, ವೈದ್ಯಕೀಯ ಅಧೀಕ್ಷಕರು, ಡಾ. ಮಖ್ದೂಮ್ ಕಿಲ್ಲೇದಾರ ಉಪ ವೈದ್ಯಕೀಯ ಅಧೀಕ್ಷಕರು, ಮತ್ತಿತರರು ಈ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು. ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಮಹಾದೇವ, ಜೆ ಜೆ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಮಂಜುನಾಥ. ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಉದಯ ಮತ್ತು ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಹಿರಿಯ ಪ್ರಾಧ್ಯಾಪಕರುಗಳು ಕಾರ್ಯಾಗಾರದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಡಾ. ರಜನಿಕಾಂತ, ಅಥಿತಿಗಳನ್ನು ಸ್ವಾಗತಸಿದರು, ಡಾ. ವಿಜಯಲಕ್ಷ್ಮಿ , ಪ್ರಾಧ್ಯಾಪಕರು ಮತ್ತು ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರು ಕಾರ್ಯಗಾರದ ಅವಲೋಕನ ನೀಡಿದರು. ಡಾ. ಸುಚಿತಾ ವಂದನಾರ್ಪಣೆ ಸಲ್ಲಿಸಿದರು.

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ -ವಿಶ್ವ ಥೈರಾಯ್ಡ್ ದಿನಾಚರಣೆ

Article Image

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ -ವಿಶ್ವ ಥೈರಾಯ್ಡ್ ದಿನಾಚರಣೆ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ವೈದ್ಯಕೀಯ ಚಿಕಿತ್ಸಾ(General Medicine) ವಿಭಾಗ ಮತ್ತು ಅಂತಃಸ್ರಾವಿಕ ಗ್ರಂಥಿ ಶಾಸ್ತ್ರ (Endocrinology) ವಿಭಾಗಗಳು ಜಂಟಿಯಾಗಿ ವಿಶ್ವ ಥೈರಾಯ್ಡ್ ದಿನಾಚರಣೆಯ ಅಂಗವಾಗಿ, ಥೈರಾಯ್ಡ್ ಸಮಸ್ಯೆಗಳ ಅರಿವು ಮೂಡಿಸಲು ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಗಾರದಲ್ಲಿ ಸುಮಾರು 150ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಂತಃಸ್ರಾವಿಕ ಗ್ರಂಥಿ ಶಾಸ್ತ್ರ (Endocrinology) ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ. ಎಂ. ಉಸ್ಮಾನ್ ಯಾದವಾಡ ಅವರು ಥೈರಾಯ್ಡ್ ಸಮಸ್ಯೆಗಳ ಬಗ್ಗೆ ಉಪನ್ಯಾಸ ನೀಡುತ್ತಾ, ಈ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆಗಳು ಎಲ್ಲಾ ವಯೋಮಾನದವರಿಗೂ ಮತ್ತು ಹುಟ್ಟಿದ ಮಕ್ಕಳಿಗೂ ಬರಬಹುದಾದ ಸಾಮಾನ್ಯ ಸಮಸ್ಯೆಯಾಗಿದೆ. ಥೈರಾಯ್ಡ್ ಸಮಸ್ಯೆಯನ್ನು ಸರಿಯಾಗಿ ನಿಯಂತ್ರಿಸಿ ನಿರ್ವಹಿಸದಿದ್ದಲ್ಲಿ ಇತರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಥೈರಾಯ್ಡ್ ಸಮಸ್ಯೆಗಳನ್ನು ಬಾರದಂತೆ ತಡೆಗಟ್ಟಲು ಸಾಧ್ಯವಿಲ್ಲ, ಜಾಗೃತಿ ಮತ್ತು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ. ಆದರೆ, ಥೈರಾಯ್ಡ್ ಸಮಸ್ಯೆಗಳು “ಸಾಂಕ್ರಾಮಿಕ ರೋಗವಲ್ಲಾ” ಎಂದು ತಿಳಿದಿರಲಿ ಎಂದರು. ವಿದ್ಯಾರ್ಥಿಗಳಿಗಾಗಿ ಚರ್ಚೆ, ರಸಪ್ರಶ್ನೆ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಡಾ. ನಿರಂಜನ ಕುಮಾರ್, ಉಪಕುಲಪತಿಗಳು, ಡಾ. ಚಿದೇಂದ್ರ ಎಂ. ಶೆಟ್ಟರ, ಕುಲಸಚಿವ, ಡಾ. ರತ್ನಮಾಲಾ ಎಂ ದೇಸಾಯಿ, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು, ಹಿರಿಯ ವೈದ್ಯರಾದ ಡಾ. ಬಸವರಾಜ ಹಳಕಟ್ಟಿ, ಡಾ. ಪಿ. ವಿಠ್ಠಲ ರಾವ್ ಮತ್ತು ಇತರರು ಉಪಸ್ಥಿತರಿದ್ದರು. ಡಾ. ಸ್ವಾಮಿ ಕಳಸೂರಮಠ, ಅಥಿತಿಗಳನ್ನು ಸ್ವಾಗತಿಸಿ, ಕಾರ್ಯಾಗಾರದ ಅವಲೋಕನ ಮಾಡಿದರು. ಡಾ. ರೈನಾ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.

ಚರ್ಮರೋಗ ತಪಾಸಣಾ ಶಿಬಿರ

Article Image

ಚರ್ಮರೋಗ ತಪಾಸಣಾ ಶಿಬಿರ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪೂಜ್ಯ ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಮತ್ತು ಹರ್ಷೇಂದ್ರ ಕುಮಾರ್ ಅವರ ನಿರ್ದೇಶನದಂತೆ ಪ್ರತಿ ತಿಂಗಳು ಉಚಿತ ರೋಗ ತಪಾಸಣಾ ಶಿಬಿರವು ನಡೆಯುತ್ತಿದ್ದು, ಮೇ 26ರಂದು ಚರ್ಮರೋಗ ತಪಾಸಣಾ ಶಿಬಿರ ನಡೆಸಲಾಯಿತು. ಈ ಶಿಬಿರದಲ್ಲಿ ಚರ್ಮದ ಕಲೆಗಳು, ಕಪ್ಪು ಕಲೆಗಳು, ಕೂದಲು ಉದುರುವಿಕೆ ಮತ್ತು ತಲೆಹೊಟ್ಟು, ಮಕ್ಕಳ ಚರ್ಮದ ತೊಂದರೆಗಳು, ಸೌಂದರ್ಯದ ಸಮಸ್ಯೆಗಳು, ಕುಷ್ಠರೋಗ ಸಮಸ್ಯೆ, ಗಾಯದ ಗುರುತುಗಳು, ಮೊಡವೆಗಳಿಗೆ ಚಿಕಿತ್ಸೆ, ಇಸುಬು, ಡ್ರಗ್ ಅಲರ್ಜಿ, ಸೋರಿಯಾಸಿಸ್, ತೊನ್ನುರೋಗ (ಬಿಳಿ ಮಚ್ಚೆ), ತುರಿಕೆ ಖಜ್ಜಿ, ಉಗುರು ಸಂಬಂಧಿತ ರೋಗಗಳ ತಪಾಸಣೆಯನ್ನು ಉಚಿತವಾಗಿ ನಡೆಸಲಾಯಿತು. ಚರ್ಮರೋಗ ತಜ್ಞರಾದ ಡಾ| ಭವಿಷ್ಯ ಕೆ. ಶೆಟ್ಟಿ MBBS., MD, DNB (DVL) ಶಿಬಿರ ಉದ್ಘಾಟಿಸಿ, ರೋಗಿಗಳ ತಪಾಸಣೆ ನಡೆಸಿದರು. ಶಿಬಿರದಲ್ಲಿ ರೋಗ ತಪಾಸಣೆ ಉಚಿತವಾಗಿತ್ತು. ಔಷಧದಲ್ಲಿ 10%, ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ 20% ರಿಯಾಯಿತಿ ನೀಡಲಾಗಿತ್ತು. ಶಿಬಿರದಲ್ಲಿ 200 ಕ್ಕೂ ಅಧಿಕ ಮಂದಿ ಭಾಗವಹಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳ ಭೇಟಿ

Article Image

ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳ ಭೇಟಿ

ಉಜಿರೆ: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಮಾಜಕಲ್ಯಾಣ ಸಚಿವ ಎಚ್. ಸಿ. ಮಹಾದೇವಪ್ಪ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮತ್ತು ಪಶುಸಂಗೋಪನಾ ಸಚಿವ ವೆಂಕಟೇಶ್ ಶನಿವಾರ(ಮೇ 25) ಧರ್ಮಸ್ಥಳಕ್ಕೆ ಬಂದಾಗ ಅವರಿಗೆ ಪ್ರವೇಶದ್ವಾರದಿಂದ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಡಿ. ಹರ್ಷೇಂದ್ರಕುಮಾರ್ ಸಚಿವರುಗಳನ್ನು ಸ್ವಾಗತಿಸಿದರು. ಬಳಿಕ ದೇವರದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿ, ಬೀಡಿನಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರುಗಳಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ ಮತ್ತು ಕೆ. ಅಭಯಚಂದ್ರ ಜೈನ್, ಶಾಸಕ ಅಶೋಕ ಕುಮಾರ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬೆಳ್ತಂಗಡಿಯ ರಕ್ಷಿತ್ ಶಿವರಾಂ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್‌ಕುಮಾರ್, ಸರ್ಕಾರದ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾದ ಡಾ. ಪುಷ್ಪಾ ಅಮರನಾಥ್ ಮತ್ತು ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ ಉಪಸ್ಥಿತರಿದ್ದರು.

ಉಜಿರೆಯಲ್ಲಿ ರಕ್ತದಾನ ಶಿಬಿರ

Article Image

ಉಜಿರೆಯಲ್ಲಿ ರಕ್ತದಾನ ಶಿಬಿರ

ರಕ್ತದಾನ ಮಾಡುವವರು ಹಾಗೂ ತೆಗೆದುಕೊಳ್ಳುವವರು ಯಾವುದೇ ಪ್ರಚಾರದ ಬಯಕೆ ಇಲ್ಲದೆ ಮಾಡುವ ರಕ್ತದಾನವು ಇತರ ಎಲ್ಲಾ ದಾನಗಳಿಗಿಂತ ಶ್ರೇಷ್ಠವಾಗಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಪೂರನ್‌ವರ್ಮ ಹೇಳಿದರು. ಅವರು ಭಾನುವಾರ ಉಜಿರೆ ಶಾರದಾ ಮಂಟಪದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ಮಂಗಳೂರಿನ ಕೆ.ಎಂ.ಸಿ. ರಕ್ತ ಕೇಂದ್ರ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ರಕ್ತದಾನ ಮಾಡಿದವರಿಗೆ ಆರೋಗ್ಯವರ್ಧನೆಯೊಂದಿಗೆ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಜೊತೆಗೆ ಧನಾತ್ಮಕ ಚಿಂತನೆಯೊಂದಿಗೆ ಧನ್ಯತಾ ಭಾವವೂ ಮೂಡಿಬರುತ್ತದೆ ಎಂದು ಅವರು ಹೇಳಿದರು. ವಿದೇಶಗಳಿಗಿಂತಲೂ ಭಾರತದಲ್ಲಿ ಆರೋಗ್ಯ ಸೇವೆ ಉತ್ತಮವಾಗಿ ನಡೆಯುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ರಕ್ತದಾನ ಶಿಬಿರದಲ್ಲಿ ಸಹಕರಿಸಿದ ಎಲ್ಲರನ್ನೂ ಅವರು ಅಭಿನಂದಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ಯಾಡಿ ಸೇವಾ ಭಾರತಿಯ ಸಂಚಾಲಕ ವಿನಾಯಕ ರಾವ್ ಕನ್ಯಾಡಿಯವರು ಮಾತನಾಡುತ್ತಾ ರಕ್ತದಾನದ ಮಹತ್ವವನ್ನು ವಿವರಿಸಿ, ಕನ್ಯಾಡಿಯಲ್ಲಿ ಸೇವಾ ಭಾರತಿಗೆ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಿ ಸೇವಾ ಕಾರ್ಯಗಳನ್ನು ವಿಸ್ತರಿಸಲಾಗುವುದು. ಈಗಾಗಲೇ ಅನೇಕ ದಾನಿಗಳು ಹಾಗೂ ಸಂಸ್ಥೆಗಳು ಉದಾರ ನೆರವಿನ ಭರವಸೆ ನೀಡಿದ್ದಾರೆ ಎಂದರು. ಉಜಿರೆ ಶರತ್‌ಕೃಷ್ಣ ಪಡ್ವೆಟ್ನಾಯ ಅಧ್ಯಕ್ಷತೆ ವಹಿಸಿದ್ದರು. ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಧರ್ಣಪ್ಪ ಗೌಡ, ಬಂಟರ ಸಂಘದ ಅಧ್ಯಕ್ಷೆ ವನಿತಾ ಶೆಟ್ಟಿ, ಜಯಶ್ರೀ ಪ್ರಕಾಶ್, ಶ್ಯಾಮ್ ಭಟ್ ಅತ್ತಾಜೆ, ಬೆಳ್ತಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಅಜಿತ್‌ ಕುಮಾರ್ ಆರಿಗ ಮತ್ತು ಜನಾರ್ದನ್ ಕಾನರ್ಪ ಉಪಸ್ಥಿತರಿದ್ದರು. ಕನ್ಯಾಡಿ ಸೇವಾ ಭಾರತಿ ಅಧ್ಯಕ್ಷರಾದ ಸ್ವರ್ಣಗೌರಿ ಸ್ವಾಗತಿಸಿದರು. ಮಾಧವ ಗೌಡ ಧನ್ಯವಾದವಿತ್ತರು. ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ-ಸೇವಕರು ರಕ್ತದಾನ ಶಿಬಿರದ ಸಂಘಟನೆಯಲ್ಲಿ ಸಕ್ರೀಯ ಸಹಕಾರ ನೀಡಿದರು.

ಮೂಡುಬಿದಿರೆ: ಬೃಹತ್ ಉದ್ಯೋಗ ಮೇಳ

Article Image

ಮೂಡುಬಿದಿರೆ: ಬೃಹತ್ ಉದ್ಯೋಗ ಮೇಳ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆಯ ‘ಆಳ್ವಾಸ್ ಪ್ರಗತಿ 2024’ ಬೃಹತ್ ಉದ್ಯೋಗ ಮೇಳದ 14ನೇ ಆವೃತ್ತಿಯು ಜೂನ್ 7 ಮತ್ತು 8ರಂದು ಆಳ್ವಾಸ್ ಕ್ಯಾಂಪಸ್ ವಿದ್ಯಾಗಿರಿ, ಮೂಡುಬಿದಿರೆಯಲ್ಲಿ ನಡೆಯಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಕಂಪನಿಗಳಿಗೆ ಸಂಪೂರ್ಣ ಉಚಿತ ಉದ್ಯೋಗಮೇಳ. IT, Automobile, ITeS, Banking and Finance, Healthcare, Sales and Retail, Media, Hospitality, Manufacturing, Education, Construction, Telecom, NGO ಹೀಗೆ 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ವೆಬ್ ಸೈಟ್ ಮೂಲಕ ಉಚಿತ ನೋಂದಣಿ ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ: 9741440490, 9663190590, 7975223865 web site: www.alvaspragati.com

ಧಾರವಾಡ, ಸತ್ತೂರು: ವಿಶ್ವ ಪ್ರಿಕ್ಲಾಂಪ್ಸಿಯಾ ದಿನಾಚರಣೆ

Article Image

ಧಾರವಾಡ, ಸತ್ತೂರು: ವಿಶ್ವ ಪ್ರಿಕ್ಲಾಂಪ್ಸಿಯಾ ದಿನಾಚರಣೆ

ಧಾರವಾಡದ ಸತ್ತೂರಿನ ಎಸ್.ಡಿ.ಎಂ. ನರ್ಸಿಂಗ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ನರ್ಸಿಂಗ್ ವಿಭಾಗ ಮತ್ತು ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರಿಕ್ಲಾಂಪ್ಸಿಯಾ ದಿನದ ಅಂಗವಾಗಿ, ಮೇ 22 ರಂದು ಸತ್ತೂರು ಗ್ರಾಮದಲ್ಲಿ ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡದ ಬಗ್ಗೆ ಜಾಗೃತಿ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಈ ಜಾಥಾವನ್ನು ಸತ್ತೂರಿನ ಕಾರ್ಪೊರೇಟರ್ ಆದ ಬಸವರಾಜ ಅರಳವಾಡಿ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ. ಆಶಾದೇವಿ ನೆರವಿ ಅವರು ಮಾತನಾಡುತ್ತಾ, ಗರ್ಭಿಣಿಯರು ಆಗಾಗ ವೈದ್ಯರನ್ನು ಸಂಪರ್ಕಿಸಿ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಬೇಕು. ಆರಂಭಿಕ ರಕ್ತದೊತ್ತಡದ ಪತ್ತೆಯು ಉತ್ತಮವಾಗಿ ನಿರ್ವಹಿಸಲು ಸಹಾಯಕಾರಿಯಾಗಿದ್ದು, ಅದನ್ನು ತಡೆಯಬಹುದು. ಆರೋಗ್ಯಕರ ಹೆರಿಗೆ ಮತ್ತು ಆರೋಗ್ಯಕರ ಮಗು ಎಲ್ಲಾ ಗರ್ಭಿಣಿಯರ ಆಶಯವಾಗಿದೆ. ಗರ್ಭಾವಸ್ಥೆಯಲ್ಲಿ ಉತ್ತಮ ಜೀವನಶೈಲಿ, ಆಹಾರ ಮತ್ತು ವ್ಯಾಯಾಮದಿಂದ ರಕ್ತದೊತ್ತಡವನ್ನು ತಡೆಯಬಹುದು ಎಂದು ಹೇಳಿದರು. ಈ ಜಾಥಾದಲ್ಲಿ 70ಕ್ಕೂ ಹೆಚ್ಚು ನರ್ಸಿಂಗ್ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ, ಗರ್ಭಾವಸ್ಥೆಯಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುವುದು ಮತ್ತು ಅದರ ನಿರ್ವಹಣೆಯ ಕುರಿತು ವಿವರಿಸಿ ಕರಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಪುಷ್ಪಾ ಪಾಟೀಲ ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಮನಿ ಬಿಜ್ಲಿ ಉಪಸ್ಥಿತರಿದ್ದರು. ಅಕ್ಷತಾ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಸುನೀತಾ ವಂದನಾರ್ಪಣೆ ಸಲ್ಲಿಸಿದರು.

ಉಜಿರೆ: ರುಡ್‌ಸೆಟ್ ಸಂಸ್ಥೆಯ 2023-24 ನೇ ಸಾಲಿನ ವಾರ್ಷಿಕ ವರದಿ ಬಿಡುಗಡೆ

Article Image

ಉಜಿರೆ: ರುಡ್‌ಸೆಟ್ ಸಂಸ್ಥೆಯ 2023-24 ನೇ ಸಾಲಿನ ವಾರ್ಷಿಕ ವರದಿ ಬಿಡುಗಡೆ

ಉಜಿರೆ ರುಡ್‌ಸೆಟ್ ಸಂಸ್ಥೆಯ 2023-24 ನೇ ಸಾಲಿನ ವಾರ್ಷಿಕ ವರದಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರೂ ಆದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಗಿರಿಧರ್ ಕಲ್ಲಾಪುರ, ಉಜಿರೆ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಎಂ. ಸುರೇಶ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 2023-24ರ ಸಂಸ್ಥೆಯ ಎಲ್ಲಾ ಚಟುವಟಿಕೆಗಳನ್ನು ಗಮನಿಸಿ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ವರ್ಷದ ಗುರಿಯನ್ನು ತಲುಪಲು ಕೆಲವು ಮಾರ್ಗದರ್ಶನವನ್ನು ತಿಳಿಸಿದರು. ಸಂಸ್ಥೆಯು ಕಳೆದ ವರ್ಷದಲ್ಲಿ 762 ಶಿಬಿರಾರ್ಥಿಗಳಿಗೆ ವಿವಿಧ ತರಬೇತಿಗಳನ್ನು ಕೊಟ್ಟು ಅದರಲ್ಲಿ 577 ಯುವಕ/ಯುವತಿಯರು ಸ್ವಂತ ಉದ್ಯೋಗವನ್ನು ಪ್ರಾರಂಬಿಸಿದ್ದಾರೆ. ಹೊಸ ತರಬೇತಿಗಳಾಗಿ ಕೋಳಿ ಸಾಕಾಣಿಕೆ, ಎಂಬ್ರಾಯಿಡರಿ ಮತ್ತು ಫ್ಯಾಬ್ರಿಕ್ ಪೈಂಟಿಂಗ್ ಮತ್ತು ಮದುಮಗಳ ಶೃಂಗಾರ ಮೊದಲಾದ ತರಬೇತಿಗಳನ್ನು ಹಮ್ಮಿಕೊಂಡಿರುತ್ತೇವೆ. ಕಳೆದ ವರ್ಷದಲ್ಲಿ ಕರ್ನಾಟಕ ಸರಕಾರದ ವಿದಾನಸಭಾ ಅಧ್ಯಕ್ಷರಾದ ಯು.ಟಿ. ಖಾದರ್‌ರವರು ಮತ್ತು ದೆಹಲಿಯ ಗ್ರಾಮೀಣ ಸಚಿವಾಲಯದ ನಿರ್ದೇಶಕರಾದ ಸಂತೋಷ್ ಕುಮಾರ್ ತಿವಾರಿರವರು ಸಂಸ್ಥೆಗೆ ಭೇಟಿ ನೀಡಿದ್ದರು. ಜೊತೆಗೆ ಬ್ಯಾಂಕಿನ ಅಧಿಕಾರಿಗಳು, ಉದ್ಯಮಿಗಳು ಮತ್ತು ಸರಕಾರಿ ಉನ್ನತ ಅಧಿಕಾರಿಗಳು ಸಂಸ್ಥೆಗೆ ಭೇಟಿ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಅಧಿಕ ರಕ್ತದೊತ್ತಡದ ಜಾಗೃತಿ ಮತ್ತು ಸಲಹಾ ಶಿಬಿರ

Article Image

ಅಧಿಕ ರಕ್ತದೊತ್ತಡದ ಜಾಗೃತಿ ಮತ್ತು ಸಲಹಾ ಶಿಬಿರ

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಎಸ್.ಡಿ.ಎಂ. ಪಾಲಿಕ್ಲಿನಿಕ್‌ನಲ್ಲಿ ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜು ಮತ್ತು ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಮೆಡಿಸಿನ್ ವಿಭಾಗದವರ ಮತ್ತು ಎನ್.ಎಸ್.ಎಸ್. ಘಟಕದ ಸಹಯೋಗದೊಂದಿಗೆ “ಜಾಗತಿಕ ಅಧಿಕ ರಕ್ತದೊತ್ತಡದ ದಿನ”ದಂದು ಉಚಿತ ರಕ್ತದೊತ್ತಡ ತಪಾಸಣೆ ಮತ್ತು ತಡೆಗಟ್ಟಲು ಮಾಡಬೇಕಾದ ವ್ಯಾಯಾಮದ ಮಹತ್ವದ ಬಗ್ಗೆ ಶಿಬಿರವನ್ನು ಮೇ 17ರಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಎಸ್.ಡಿ.ಎಂ. ಮೆಡಿಕಲ್ ಕಾಲೇಜಿನ, ವೈದ್ಯಕೀಯ ಚಿಕಿತ್ಸಾ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಬಸವರಾಜ ಹಳಕಟ್ಟಿ ಅವರು ಉದ್ಘಾಟಿಸಿ ಮಾತನಾಡುತ್ತಾ 40 ವರ್ಷ ಮೇಲ್ಪಟ್ಟ ಜನರು ಆಗಾಗ ಅಧಿಕ ರಕ್ತದೊತ್ತಡ ತಪಾಸಣೆ ಮಾಡಿಸಿಕೊಳ್ಳಬೇಕು. ರಕ್ತದೊತ್ತಡದಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅಧಿಕ ರಕ್ತದೊತ್ತಡ ಹೊಂದಿರುವವರು ವೈದ್ಯರನ್ನು ಸಂಪರ್ಕಿಸಬೇಕು. ಉತ್ತಮ ಜೀವನಶೈಲಿಯಿಂದ ರೋಗಗಳನ್ನು ತಡೆಯಬಹುದು. ಕೆಲವೊಮ್ಮೆ ಅಧಿಕ ರಕ್ತದೊತ್ತಡವು ಅನುವಂಶೀಯವಾಗಿದ್ದು, ಯಾವುದೇ ರೋಗ ಲಕ್ಷಣಗಳು ಕಾಣದಿರಬಹುದು ಎಂದರು. ಕಾರ್ಡಿಯೋರೆಸ್ಪಿರೇಟರಿ ವಿಭಾಗದ ಮುಖ್ಯಸ್ಥರಾದ ಡಾ. ಸಂಗಿತಾ ಅಪ್ಪಣ್ಣವರ ಮತ್ತು ಡಾ. ಶರಣ ಅವರು ಅಧಿಕ ರಕ್ತದೊತ್ತಡದ ಜಾಗೃತಿಯ ಕುರಿತು ವಿವರಿಸಿದರು. ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ ಪರಮಾರ ಅವರು ಉಪಸ್ಥಿತರಿದ್ದರು. ಡಾ. ತುಳಸಿ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.

ಜಂಗಮಶೆಟ್ಟಿ ರಂಗಪ್ರಶಸ್ತಿಗೆ ಆಹ್ವಾನ

Article Image

ಜಂಗಮಶೆಟ್ಟಿ ರಂಗಪ್ರಶಸ್ತಿಗೆ ಆಹ್ವಾನ

ಕಲಬುರಗಿ: ಇಲ್ಲಿನ ರಂಗಸಂಗಮ ಕಲಾವೇದಿಕೆ ನೀಡುವ ಎಸ್. ಬಿ. ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಾಧನೆಗೈದ ರಂಗಕರ್ಮಿಗಳ ಹೆಸರನ್ನು ರಂಗಾಸಕ್ತರು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು ಎಂದು ರಂಗಸಂಗಮ ಕಲಾವೇದಿಕೆ ಕಾರ್ಯದರ್ಶಿ ಡಾ. ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿಯು ತಲಾ 10,000 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸನ್ಮಾನ ಒಳಗೊಂಡಿದ್ದು, ಜುಲೈ 18ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಸಕ್ತ ಸಾಲಿನ ಪ್ರಶಸ್ತಿಗೆ ಅರ್ಜಿ ಅಥವಾ ನಾಮನಿರ್ದೇಶನಗಳನ್ನು ಜೂ.6 ರೊಳಗೆ ಕಳುಹಿಸಬಹುದು. ವಿಳಾಸ: ಡಾ.ಸುಜಾತಾ ಜಂಗಮ ಶೆಟ್ಟಿ, ಓಂ ರೆಸಿಡೆನ್ಸಿ, ಎರಡನೇ ಮಹಡಿ, ಶ್ರೀನಿವಾಸ ಕಣ್ಣಿನ ಆಸ್ಪತ್ರೆ ಪಕ್ಕ, ಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ, ಹಳೆಯ ಜೇವರ್ಗಿ ರಸ್ತೆ, ಕಲಬುರಗಿ- 585102.

ನೀಟ್ ಅಭ್ಯರ್ಥಿಗಳ ಸಿಇಟಿ ನೋಂದಣಿ: ಕೆಇಎ ಸ್ಪಷ್ಟನೆ

Article Image

ನೀಟ್ ಅಭ್ಯರ್ಥಿಗಳ ಸಿಇಟಿ ನೋಂದಣಿ: ಕೆಇಎ ಸ್ಪಷ್ಟನೆ

ಬೆಂಗಳೂರು: ನೀಟ್ ಪರೀಕ್ಷೆ ಬರೆದವರು ಕೂಡ ರಾಜ್ಯದ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಪಡೆಯಲು ಸಿಇಟಿಗೆ ನೋಂದಣಿ ಮಾಡಿಸಬೇಕು ಎಂಬ ನಿಯಮ ಹಿಂದಿನಿಂದಲೂ ಜಾರಿಯಲ್ಲಿದೆ. ಇದು ಹೊಸದಾಗಿ ಜಾರಿಯಾಗಿರುವ ನಿಯಮವಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸ್ಪಷ್ಟಪಡಿಸಿದೆ. ಈ ಸಂಬಂಧ ಕೆಇಎ ಹೊಸ ನಿಯಮ ಜಾರಿಗೊಳಿಸಿರುವುದರಿಂದ ಹಲವಾರು ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ ಎಂದು ಕೆಲವರು ಅನಗತ್ಯವಾಗಿ ಗುಲ್ಲೆಬ್ಬಿಸುತ್ತಿದ್ದಾರೆ ಎಂದು ಕೆಇಎ ಹೇಳಿದೆ. ಪ್ರಸಕ್ತ ಸಾಲಿನಲ್ಲಿ ನೀಟ್ ಬರೆದಿರುವ ಸುಮಾರು 2 ಲಕ್ಷ ಅಭ್ಯರ್ಥಿಗಳು ಸಿಇಟಿಗೆ ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ 50,000 ವಿದ್ಯಾರ್ಥಿಗಳು ಹೊರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ರಾಜ್ಯದಲ್ಲಿ ವೈದ್ಯಕೀಯ ಸೀಟು ಹಂಚಿಕೆಗೆ ಕೆಇಎ ನೋಡಲ್ ಸಂಸ್ಥೆ ಎಂದೂ ಕೆಇಎ ಸ್ಪಷ್ಟಪಡಿಸಿದೆ.

ಉಜಿರೆ: ರುಡ್ ಸೆಟ್‌ ಸಂಸ್ಥೆ-“ಮಹಿಳೆಯರಿಗೆ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ಬಹಳ ಮುಖ್ಯ”

Article Image

ಉಜಿರೆ: ರುಡ್ ಸೆಟ್‌ ಸಂಸ್ಥೆ-“ಮಹಿಳೆಯರಿಗೆ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ಬಹಳ ಮುಖ್ಯ”

ಹೆಣ್ಣು ಮಕ್ಕಳನ್ನು ಪೋಷಕರು ಬೆಳೆಸುವಾಗ ಸಾಮಾನ್ಯವಾಗಿ ಮದುವೆಯ ಬಗ್ಗೆ ಯೋಚನೆ ಮಾಡುತ್ತಾರೆ ವಿದ್ಯಾಭ್ಯಾಸ ನೀಡುತ್ತಾರೆ ಆದರೆ ಉದ್ಯೋಗದ ಬಗ್ಗೆ ಯೋಚಿಸುವುದು ಕಡಿಮೆ. ಇಂದಿನ ಹೆಣ್ಣು ಮಕ್ಕಳಿಗೆ ವಿದ್ಯೆಯ ಜೊತೆಗೆ ಉದ್ಯೋಗ ಬೇಕು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ‍್ಯ ಬಹು ಮುಖ್ಯವಾಗುತ್ತದೆ. ನಮ್ಮ ಕೈಯಲ್ಲಿ ನಮ್ಮ ದುಡ್ಡು ಇರಬೇಕು ನಮ್ಮ ಮತ್ತು ಮಕ್ಕಳ ಬೇಕು-ಬೇಡಗಳಿಗೆ, ಸ್ಪಂದಿಸಲು ಅನುಕೂಲವಾಗುತ್ತದೆ. ಇನ್ನೂ ಮುಖ್ಯವಾಗಿ ನಮ್ಮ ಮನೋಬಲ ಏನು, ನಮ್ಮ ಒಳಗೆ ಏನು ಆಸೆ ಇದೆ. ನಮ್ಮಲ್ಲಿ ಏನು ಪ್ರತಿಭೆ ಇದೆ. ನಮ್ಮ ವ್ಯಕ್ತಿತ್ವ ಏನು ಎಂಬುದನ್ನು ತಿಳಿದಿರಬೇಕು. ಪದವಿ ಓದಿದ ನಂತರ ಕೂಡ ಮುಂದೆ ಏನು ಮಾಡಬೇಕು ಎಂಬುದನ್ನು ತಿಳಿದಿರಬೇಕು. ನಮ್ಮಲ್ಲಿ ಏನು ಕೌಶಲ್ಯ ಇದೆ ಎಂಬುದು ಗೊತ್ತಿರಬೇಕು. ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ಕೌಶಲ್ಯಗಳು ಇರುತ್ತದೆ. ಅದನ್ನು ಗುರುತಿಸಿ, ಪೋಷಿಸಿ ಬೆಳೆಸಬೇಕು ಇದು ಮುಖ್ಯ. ಇಂದು ಬೇರೆ ಬೇರೆ ಸಾಮಾಜಿಕ ಜಾಲತಾಣ ಮೂಲಕ ವಿಷಯಗಳನ್ನು ಕಲಿತು ಜ್ಙಾನ ವೃದ್ಧಿ ಮಾಡಿಕೊಳ್ಳಬಹುದು, ರುಡ್ ಸೆಟ್ ಸಂಸ್ಥೆಯಲ್ಲಿ ಮಾತ್ರ ಕೌಶಲ್ಯದ ಜೊತೆಗೆ ವ್ಯಕ್ತಿತ್ವ ವಿಕಸನವನ್ನು ಕಲಿಸಿಕೊಡುತ್ತಾರೆ ಇದು ವ್ಯವಹಾರದಲ್ಲಿ ಬಹಳ ಮುಖ್ಯವಾಗಿರುತ್ತದೆ. ರುಡ್ ಸೆಟ್ ಸಂಸ್ಥೆಯಲ್ಲಿ ಎಲ್ಲಾ ವಿಷಯಗಳನ್ನು ಒಟ್ಟಿಗೆ ಸಿಗುವುದರಿಂದ ನಿಮಗೆ ಅನುಕೂಲವಾಗುತ್ತದೆ ಮುಂದೆ ತರಬೇತಿಯಲ್ಲಿ ಕಲಿತ ವಿಷಯವನ್ನು ನೀವು ಗ್ರಾಹಕರಿಗೆ ಯಾವ ರೀತಿ ವಿಭಿನ್ನವಾಗಿ ನಿರೂಪಿಸುತ್ತೀರಿ ಅದರ ಮೂಲಕ ನಿಮ್ಮನ್ನು ನೀವು ತೋರಿಸಿಕೊಡಬೇಕು. ಅನ್ನುವುದನ್ನು ನೀವು ರೂಪಿಸಕೊಳ್ಳಲು ನಿಮ್ಮಲ್ಲಿ ಸಮಯ ನಿರ್ವಹಣೆ, ಹಣಕಾಸಿ ವ್ಯವಹಾರ, ಉತ್ತಮ ಮಾತುಗಾರಿಕೆ ಮುಖ್ಯವಾಗಿ ಇರಲಿ, ಗ್ರಾಹಕರ ನಂಬಿಕೆ ಉಳಿಸಿಕೊಂಡು ಉತ್ತಮವಾದ ಬಾಂಧವ್ಯವನ್ನು ಬೆಳೆಸಿಕೊಳ್ಳಿ, ನಿಮ್ಮ ವೃತ್ತಿ ಜೀವನದ ದಾರಿಯಲ್ಲಿ ನಿಮಗೆಲ್ಲ ಯಶಸ್ಸು ಸಿಗಲಿ ಎಂದು ಬೆಂಗಳೂರು ಕ್ಷೇಮವನದ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶೃದ್ಧಾ ಅಮಿತ್ ಅಭಿಪ್ರಾಯಪಟ್ಟರು. ಅವರು ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 06 ದಿನ ಗಳ ಕಾಲ ನಡೆದ ಮದುಮಗಳ ಶೃಂಗಾರ -ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಶುಭ ಹಾರೈಸಿದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಎಮ್. ಸುರೇಶ್‌ರವರು ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿದರು. ಕಾರ್ಯಕ್ರಮದಲ್ಲಿ ಎಸ್.ಕೆ.ಡಿ.ಆರ್.ಡಿ.ಪಿಯ ನಿಕಟಪೂರ್ವಕ ಪ್ರಾದೇಶಿಕ ನಿರ್ದೇಶಕರಾದ ಮಹಾವೀರ ಅಜ್ರಿ ಅವರು ಉಪಸ್ಥಿತರಿದ್ದರು ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ರವರು ಕಾರ್ಯಕ್ರಮ ನಿರೂಪಿಸಿದರು, ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ಅವರು ವಂದಿಸಿದರು. ತರಬೇತಿಯಲ್ಲಿ ಒಟ್ಟು 35 ಜನ ಅಭ್ಯರ್ಥಿಗಳು ಭಾಗವಹಿಸಿದ್ದರು. ಕೆಲವು ಶಿಬಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಕಾರ್ಯನಿರ್ವಾಹಕ, ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ರವರಿಗೆ ಬೀಳ್ಕೊಡುಗೆ

Article Image

ಕಾರ್ಯನಿರ್ವಾಹಕ, ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ರವರಿಗೆ ಬೀಳ್ಕೊಡುಗೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಡಾ.ಎಲ್.ಎಚ್. ಮಂಜುನಾಥ್ ಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವು ಮೇ.11ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಡಾ.ಎಲ್.ಎಚ್. ಮಂಜುನಾಥರವರು ಅದ್ಬುತ ಕೆಲಸಗಳ ಮೂಲಕ ಜನರ ಪ್ರೀತಿ ವಿಶ್ವಾಸ ನಂಬಿಕೆಗಳಿಸಿದ್ದಾರೆ. ನಮ್ಮಲ್ಲಿ ಸಮಾಜಕ್ಕಾಗಿ ದುಡಿಯುವ ತುಡಿತವಿರಬೇಕು, ಏನೂ ಮಾಡಬೇಕೆಂಬುದರ ಬಗ್ಗೆ ಜ್ಞಾನವಿರಬೇಕು ಎಂದರು. ಡಾ.ಎಲ್.ಎಚ್ ಮಂಜುನಾಥ್ ಅವರು ಮಾತನಾಡಿ ಡಾ. ಹೆಗ್ಗಡೆಯವರು ನನಗೆ ದೇವರಿದ್ದಾಗೆ. ಕಳೆದ 23 ವರ್ಷಗಳ ಕಾಲ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ಪೂಜ್ಯರಿಗೆ ಕೃತಜ್ಞತೆ ಅರ್ಪಿಸಿದರು. ಭಾರತೀಯ ಜೀವ ವಿಮಾ ನಿಗಮದ ಮುಂಬೈ ಕೇಂದ್ರ ಕಚೇರಿ ವ್ಯವಸ್ಥಾಪಕ, ನಿರ್ದೇಶಕ ಎಂ. ಜಗನ್ನಾಥ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟಿಗಳು, ಜ್ಞಾನವಿಕಾಸ ಕಾರ್ಯಕ್ರಮ ಅಧ್ಯಕ್ಷೆ ಡಾ. ಹೇಮಾವತಿ ವೀ. ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟಿಗಳಾದ ಡಿ.ಸುರೇಂದ್ರ ಕುಮಾರ್, ವೈ ನಾಗೇಶ್ವರ ರಾವ್, ಸಂಪತ್ ಸಾಮ್ರಾಜ್ಯ, ಉದಯಕುಮಾರ್ ಶೆಟ್ಟಿ, ಶ್ಯಾಮ್ ಭಟ್, ಯೋಜನೆಯ ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ್ ಆರ್. ಪೈ, ಡಾ.ಎಲ್.ಎಚ್. ಮಂಜುನಾಥ್ ಅವರ ಧರ್ಮಪತ್ನಿ ನಳಿನಿ, ಪುತ್ರ ಡಾ. ರೋಹನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸುಪ್ರೀಯಾ ಹರ್ಷೇಂದ್ರ ಕುಮಾರ್, ಶ್ರದ್ದಾ ಅಮಿತ್ ಹಾಗೂ ಯೋಜನೆಯ ವಿವಿಧ ವಿಭಾಗದ ಅಧಿಕಾರಿಗಳು, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. ಡಾ.ಎಲ್.ಎಚ್. ಮಂಜುನಾಥ್ ದಂಪತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಯೋಜನೆಯ ಪ್ರಾದೇಶಿಕ ಕಚೇರಿ, ಕೇಂದ್ರ ಕಚೇರಿ ಹಾಗೂ ಎಸ್.ಡಿ.ಎಂ ನ ವಿವಿಧ ವಿಭಾಗಗಳಿಂದ ಗೌರವಿಸಲಾಯಿತು. ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪೂಜಾ ಪಕ್ಕಳ, ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಸಮುದಾಯ ವಿಭಾಗದ ಅಭಿವೃದ್ಧಿ ಅಧಿಕಾರಿ ಆನಂದ ಸುವರ್ಣ ವಂದಿಸಿದರು.

ಕನ್ನಡ ಸಾಹಿತ್ಯ ಪರಿಷತ್: ಸಂಸ್ಥಾಪನಾ ದಿನಾಚರಣೆ

Article Image

ಕನ್ನಡ ಸಾಹಿತ್ಯ ಪರಿಷತ್: ಸಂಸ್ಥಾಪನಾ ದಿನಾಚರಣೆ

ಉಜಿರೆ: ತಾಯಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾಗಿದೆ. ಕನ್ನಡನಾಡು, ನುಡಿ ಮತ್ತು ಸಂಸ್ಕೃತಿಯನ್ನು ಸದಾ ಲವಲವಿಕೆಯೊಂದಿಗೆ ಜೀವಂತವಾಗಿರಿಸಲು ಕನ್ನಡ ಸಾಹಿತ್ಯ ಪರಿಷತ್ತನ್ನು ಸದೃಢಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕುಮಾರ ಹೆಗ್ಡೆ ಅವರು ಭಾನುವಾರ(ಮೇ 5) ಸಿದ್ಧವನ ಗುರುಕುಲದಲ್ಲಿ ಆಯೋಜಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ 110ನೆ ಸಂಸ್ಥಾಪನಾ ದಿನಾಚರಣೆ ಉದ್ಘಾಟಸಿ ಶುಭ ಹಾರೈಸಿದರು. ಇಂದು ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಹೋಬಳಿ ಮಟ್ಟದವರೆಗೂ ಹೆಚ್ಚಿನ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಮಾತನಾಡಿ ಜಿಲ್ಲೆಯಲ್ಲಿ ನಾಲ್ಕುನೂರಕ್ಕೂ ಮಿಕ್ಕಿ ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯ, ನುಡಿ, ಸಂಸ್ಕೃತಿ ಬಗ್ಗೆ ಅರಿವು, ಜಾಗೃತಿ ಮೂಡಿಸಲಾಗಿದೆ ಎಂದರು. ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತಿ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀಶ ಕುಮಾರ್ ಅವರು ಮಾತನಾಡಿ, ಶಬ್ದ ಮತ್ತು ಅರ್ಥಗಳ ಮಂಜುಳ ಸಂಯೋಜನೆಯೇ ಮನಕ್ಕೆ ಮುದ ನೀಡುವ ಸಾಹಿತ್ಯ ಆಗುತ್ತದೆ. ಸಾಹಿತ್ಯ ಕೃತಿಗಳನ್ನು ಓದುವ, ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಮಂಗಳೂರಿನ ಡಾ. ಮಾಧವ ಎಂ.ಕೆ. ಮಾತನಾಡಿ ವಿದೇಶೀಯರ ದಾಳಿಗಳು ಕನ್ನಡ ಭಾಷೆಯ ಮೇಲೂ ಗಾಢ ಪರಿಣಾಮ ಬೀರಿವೆ. ಕನ್ನಡದ ಬಗ್ಗೆ ಕೀಳರಿಮೆ ಸಲ್ಲದು ಎಂದರು. ರಾಮಕೃಷ್ಣ ಭಟ್ ಚೊಕ್ಕಾಡಿ ಕಾರ್ಯಕ್ರಮ ನಿರ್ವಹಿಸಿದರು.

ಉಜಿರೆ: ನಿವೃತ್ತ ನೌಕರನಿಗೆ ಸನ್ಮಾನ

Article Image

ಉಜಿರೆ: ನಿವೃತ್ತ ನೌಕರನಿಗೆ ಸನ್ಮಾನ

ಸಂಸ್ಥೆಯ ನೌಕರರು ಸಂಸ್ಥೆಯ ಎಲ್ಲಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಸಂಸ್ಥೆಯ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ. ನೌಕರರು ಎಂದೂ ಅಡಗಿಸಿಕೊಳ್ಳಬಾರದು ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು. ಅವರು ಬುಧವಾರ ಧರ್ಮಸ್ಥಳದಲ್ಲಿರುವ ಶಾಂತಿವನದಲ್ಲಿ 36 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಚಂದು ನಾಯ್ಕ ಅವರನ್ನು ಸನ್ಮಾನಿಸಿ ಮಾತನಾಡಿದರು. ನೌಕರರು ಸಂಸ್ಥೆಯ ಧ್ಯೇಯವನ್ನು ಅರಿತು ಕರ್ತವ್ಯ ಪಾಲನೆ ಮಾಡಿದರೆ ಸಂಸ್ಥೆ ಬೆಳೆಯುತ್ತದೆ, ಬೆಳಗುತ್ತದೆ ಎಂದು ಅವರು ಹೇಳಿದರು. ಎಸ್.ಡಿ.ಎಂ. ಕಾಲೇಜಿನ ಸಂಸ್ಕೃತ ಉಪನ್ಯಾಸಕ ಶ್ರೀಧರ ಭಟ್ ಅಭಿನಂದನಾ ಭಾಷಣ ಮಾಡಿದರು. ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಡಾ. ಶಶಿಕಾಂತ್ ಜೈನ್ ಧನ್ಯವಾದವಿತ್ತರು. ಅನನ್ಯಾ ಕಾರ್ಯಕ್ರಮ ನಿರ್ವಹಿಸಿದರು.

ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಬೆಳ್ತಂಗಡಿ ಸುವರ್ಣ ಆರ್ಕೇಡ್ ಗೆ ಸ್ಥಳಾಂತರ

Article Image

ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಬೆಳ್ತಂಗಡಿ ಸುವರ್ಣ ಆರ್ಕೇಡ್ ಗೆ ಸ್ಥಳಾಂತರ

ಬೆಳ್ತಂಗಡಿ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ (ನಿ)ವು ರಾಜ್ಯ ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ಈ ವರೆಗೆ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಸುವರ್ಣ ಆರ್ಕೇಡ್ ಕಟ್ಟಡಕ್ಕೆ ಇಂದು ಸ್ಥಳಾಂತರಗೊಂಡಿತು . ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ.ರವರು ಸಹಕಾರಿ ಸಂಘದ ಅಧ್ಯಕ್ಷರಾದ ಡಾ.ಕೆ. ಜಯಕೀರ್ತಿ ಜೈನ್‌ರವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಪರಮೇಶ್ ಟಿ., ಚಂದ್ರಶೇಖರ್, ರತ್ನಾವತಿ, ಪ್ರಶಾಂತ ಕುಮಾರ್, ಹರಿಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವತ್ಸಲಾ ಜ್ಯೋತಿರಾಜ್, ಶಾಖಾ ವ್ಯವಸ್ಥಾಪಕ ಪಿ. ಅತಿಶಯ್ ಜೈನ್, ಮುಖ್ಯ ಪಶು ವೈದ್ಯಾಧಿಕಾರಿ ಡಾ| ರವಿ ಕುಮಾರ್, ಸಬ್ ರಿಜಿಸ್ಟ್ರಾರ್ ನಾಗರಾಜ್, ಸಿಬ್ಬಂದಿಗಳಾದ ವಿಶಾಲ, ನಿತಿನ್ ಹಾಗೂ ನಿತ್ಯನಿಧಿ ಠೇವಣಿ ಸಂಗ್ರಾಹಕರು ಉಪಸ್ಥಿತರಿದ್ದರು..ಸಹಕಾರಿ ಸಂಘದ ಸಲಹೆಗಾರರಾದ ವಸಂತ ಸುವರ್ಣರವರು ಸ್ವಾಗತಿಸಿ, ಉಪಾಧ್ಯಕ್ಷರಾದ ಚಿದಾನಂದ ಎಸ್. ಹೂಗಾರ್‌ರವರು ವಂದಿಸಿದರು. ಈ ಸಹಕಾರಿ ಸಂಘದಲ್ಲಿ ಇ-ಸ್ಟ್ಯಾಂಪಿಂಗ್ , ಕಲರ್ ಝೆರಾಕ್ಸ್,, ಝೆರಾಕ್ಸ್,, ಆಯುಷ್ಮಾನ್ ಹೆಲ್ತ್ ಕಾರ್ಡ್, ಪಹಣಿ ಪತ್ರ, ಎಲ್ಲಾ ಬಗೆಯ ಸ್ಟೇಷನರಿಗಳು ಮಿತ ದರದಲ್ಲಿ ದೊರೆಯುವ ಸೌಲಭ್ಯಗಳು ಇರುತ್ತದೆ.

ನಾಳೆಯಿಂದ ಪುತ್ತೂರು ವಾರ್ಷಿಕ ಜಾತ್ರೆ ಆರಂಭ

Article Image

ನಾಳೆಯಿಂದ ಪುತ್ತೂರು ವಾರ್ಷಿಕ ಜಾತ್ರೆ ಆರಂಭ

ಪುತ್ತೂರು, ಎ.9: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆ ಎ.10 ರಿಂದ ಪ್ರಾರಂಭಗೊಳ್ಳಲಿದ್ದು, ಎ.20ರ ತನಕ ನಡೆಯಲಿದೆ. 10 ದಿನಗಳ ಜಾತ್ರೆಯ ಸಂದರ್ಭದಲ್ಲಿ ದೇವರು ದಶ ದಿಕ್ಕುಗಳಿಗೆ ಪೇಟೆ ಸವಾರಿ ತೆರಳಿ ಭಕ್ತರ ಕಟ್ಟೆ ಪೂಜೆ ಸೇವೆಯನ್ನು ಸ್ವೀಕರಿಸಲಿದ್ದಾರೆ. 10 ದಿನಗಳ ಕಾಲ ಪೇಟೆ ಸವಾರಿ ನಡೆಯುವ ಜಾತ್ರೆ ಪುತ್ತೂರಿನಲ್ಲಿ ಮಾತ್ರವಾಗಿದ್ದು, ದ.ಕ. ಜಿಲ್ಲೆಯ ಮಟ್ಟಿಗೆ ಇದು ಧಾರ್ಮಿಕ ಚರಿತ್ರೆ. ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು, ಪಲ್ಲಕಿ ಉತ್ಸವ, ಸಣ್ಣ ರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ, 157 ಕಟ್ಟೆಪೂಜೆ, 12 ಕಿ.ಮೀ. ದೂರದ ವೀರಮಂಗಲಕ್ಕೆ ಅವಭೃತಸ್ನಾನ, ದೈವಗಳ ನೇಮದ ಸಂಭ್ರಮಕ್ಕೆ ಪುತ್ತೂರಿನ ಸೀಮೆ ಸಜ್ಜಾಗಿದೆ.

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ: ವಾರ್ಷಿಕ ಮಹಾಸಭೆ, ಹಿರಿಯ ನಾಗರಿಕರಿಗೆ ಸನ್ಮಾನ

Article Image

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ: ವಾರ್ಷಿಕ ಮಹಾಸಭೆ, ಹಿರಿಯ ನಾಗರಿಕರಿಗೆ ಸನ್ಮಾನ

ಉಜಿರೆ: ಸಂಘದ ಸದಸ್ಯರಾದ ಅಚ್ಚಿನಡ್ಕ ವೀರಮ್ಮನವರು ಬೆಳ್ತಂಗಡಿಯಲ್ಲಿ ಕೆಲ್ಲಗುತ್ತು ಪರಿಸರದಲ್ಲಿ ಉದಾರ ಕೊಡುಗೆಯಾಗಿ ನೀಡಿದ ಹತ್ತು ಸೆಂಟ್ಸ್ ನಿವೇಶನದಲ್ಲಿ ಒಂದು ವರ್ಷದೊಳಗೆ ಸುಸಜ್ಜಿತ ನೂತನ ಕಟ್ಟಡ ನಿರ್ಮಿಸಿ ಉದ್ಘಾಟನಾ ಸಮಾರಂಭವನ್ನು ವೈಭವದಿಂದ ಆಯೋಜಿಸಲಾಗುವುದು ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಬಿ. ವಿಠಲ ಶೆಟ್ಟಿ ಹೇಳಿದರು. ಅವರು ಇತ್ತೀಚೆಗೆ ಬೆಳ್ತಂಗಡಿಯ ರಾಜ್ಯ ಸರ್ಕಾರಿ ನೌಕರರ ಸಭಾಭವನದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಮಟ್ಟದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಪ್ರಕಟಿಸಿದರು. ಸಂಘದ ಹಿರಿಯ ಸದಸ್ಯರುಗಳಾದ ಎಂ. ಕೆ. ಆರಿಗ, ಮಹಾಬಲ ಹೆಗ್ಡೆ, ಲಲಿತ, ಬಾಬುಗೌಡ, ಆಗ್ನೇಸ್ ಡೇಸಾ, ದೇವಪ್ಪ ಗೌಡ, ಪ್ರೊ. ಕೆ. ವಿಷ್ಣುಮೂರ್ತಿ ಭಟ್, ವಿಕ್ಟರ್ ಮೊರಾಸ್, ನಿವೃತ್ತ ಉಪನ್ಯಾಸ ಸುಬ್ರಹ್ಮಣ್ಯ ಮಧ್ಯಸ್ತ, ಸೋಮನಾಥ ಮಯ್ಯ ಅಳದಂಗಡಿ, ಜುಲಿಯಾನಾ ಲೋಬೊ, ಪ್ರೊ. ಉದಯಕುಮಾರ ಮಲ್ಲ, ಬೆಳ್ತಂಗಡಿ, ಬಾಬು ಪೂಜಾರಿ ಕೆದ್ದು, ರಾಮ ಕಾರಂತ ಉಜಿರೆ, ಬಾಬು ಗೌಡ ಮುಂಡಾಜೆ ಮೊದಲಾದರನ್ನು ಗೌರವಿಸಲಾಯಿತು. ಇತ್ತೀಚೆಗೆ ನಿಧನರಾದ ಪ್ರೊ. ನಾ’ವುಜಿರೆ ಅವರಿಗೆ ಆರ್. ಯನ್. ಪೂವಣಿ ಹಾಗೂ ನಿವೃತ್ತ ಶಿಕ್ಷಕ ಜಯರಾಜ ಕಾಡ ಕುತ್ಲೂರು ಅವರಿಗೆ ವಸಂತರಾವ್ ನುಡಿನಮನ ಸಲ್ಲಿಸಿದರು. ಕೋಶಾಧಿಕಾರಿ ಜಗನ್ನಿವಾಸ ರಾವ್ ಮತ್ತು ಉಪಾಧ್ಯಕ್ಷರಾದ ಕುಸುಮಾವತಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪದ್ಮಕುಮಾರ್ ವರದಿ ಸಾದರಪಡಿಸಿದರು. ಸಂಘದ ಉಪಾಧ್ಯಕ್ಷ ಸನ್ಮತ್ ಕುಮಾರ್ ನಾರಾವಿ ಸ್ವಾಗತಿಸಿದರು. ಪದ್ಮಕುಮಾರ್ ಧನ್ಯವಾದವಿತ್ತರು.

First Previous

Showing 6 of 7 pages

Next Last