ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 22ನೇ ಶಾಖೆ ಪುರುಷರಕಟ್ಟೆಯಲ್ಲಿ ಶುಭಾರಂಭ
ಪುತ್ತೂರು: ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ' ಹಾಗೂ ರಾಜ್ಯ ಮಟ್ಟದ ‘ಉತ್ತಮ ಸಹಕಾರ ಸಂಘ ಪ್ರಶಸ್ತಿ' ಪುರಸ್ಕೃತಗೊಂಡ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು ಬೆಳ್ತಂಗಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, 22ನೇ ಶಾಖೆಯು ಜ. 28ರಂದು ನರಿಮೊಗರು ಗ್ರಾಮದ ಪುರುಷರಕಟ್ಟೆ ಸಿದ್ದಣ್ಣ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.
ಕಾರ್ಯಕ್ರಮವನ್ನು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಉದ್ಘಾಟಿಸಿ ಮಾತನಾಡುತ್ತಾ, ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು ಅತೀ ಕಡಿಮೆ ಅವಧಿಯಲ್ಲಿ ರೂ. 1000 ಕೋಟಿ ವ್ಯವಹಾರ ನಡೆಸುವ ಗಣನೀಯ ಸಾಧನೆ ಮಾಡಿದೆ. ಬ್ಯಾಂಕ್ ಮುನ್ನಡೆಯಲು ಠೇವಣಿಗಾರರಗಿಂತ ಸಾಲಗಾರರೇ ಮುಖ್ಯ. ನೀಡಿದ ಸಾಲ ಮರುಪಾವತಿಸುವಲ್ಲಿ ಸಿಬ್ಬಂದಿಗಳ ಕಾರ್ಯದಕ್ಷತೆ, ಕ್ರಿಯಾಶೀಲತೆ ಪ್ರಮುಖವಾಗಿದೆ. ಈ ಸಂಘವು ಅಂತರಾಜ್ಯ ಸಂಸ್ಥೆಯಾಗಿ ಬೆಳೆಯಲಿ. ಪುತ್ತೂರಿನಲ್ಲಿ ಈಗಾಗಲೇ ಎರಡು ಶಾಖೆ ಪ್ರಾರಂಭವಾಗಿದ್ದು ಇನ್ನೂ 8 ಶಾಖೆಗಳು ಪ್ರಾರಂಭವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ಮಾತನಾಡುತ್ತಾ, ನಮ್ಮ ಶಾಖೆಯ ಮುಖಾಂತರ ಗ್ರಾಹಕರಿಗೆ ಪ್ರಾಮಾಣಿಕ, ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತವನ್ನು ಸಿಬಂದಿಗಳ ಮೂಲಕ ನೀಡಲಾಗುವುದು ಎಂದು ಹೇಳಿದರು.
ಕ್ರೀಡಾ ಕ್ಷೇತ್ರದ ಸಾಧಕರಾದ ದೀಕ್ಷಾ ಹಾಗೂ ಭವಿತ್ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಖೆಗೆ ಸ್ಥಳಾವಕಾಶ ನೀಡಿದ ಸಿದ್ದಣ್ಣ ಪ್ರಭು ಕಟ್ಟಡದ ಮಾಲಕ ನವೀನ್ ಪ್ರಭುರವರನ್ನು ಕಾರ್ಯಕ್ರಮದಲ್ಲಿ ಸನ್ಮಾಸಲಾಯಿತು. ಕಾರ್ಯಕ್ರಮದಲ್ಲಿ ಭದ್ರತಾ ಕೋಶ ಉದ್ಘಾಟಿಸಿದ ನರಿಮೊಗರು ಗ್ರಾ.ಪಂ. ಅಧ್ಯಕ್ಷೆ ಹರಿಣಿ ನಿತ್ಯಾನಂದ, ಗಣಕಯಂತ್ರ ವಿಭಾಗವನ್ನು ಉದ್ಘಾಟಿಸಿದ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನವೀನ್ ಡಿ., ನಿರಖು ಠೇವಣಿ ಪ್ರಮಾಣ ಪತ್ರ ವಿತರಿಸಿದ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್, ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ಸಂಘದ ವಿಶೇಷಾಧಿಕಾರಿ ಯಂ. ಮೋನಪ್ಪ ಪೂಜಾರಿ ಕಂಡೆತ್ಯಾರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರಿ ಹೊನ್ನಪ್ಪ ಶಾಂತಿಗೋಡು ಪ್ರಾರ್ಥಿಸಿ, ಸಂಘದ ಉಪಾಧ್ಯಕ್ಷ ಭಗೀರಥ ಜಿ. ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ ಕುಮಾರ್ ಹಾಗೂ ಕಡಬ ಶಾಖೆಯ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಆನಂದ ಪೂಜಾರಿ ಸರ್ವೆದೋಳ ವಂದಿಸಿದರು.