Article Image

ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಬೆಳ್ತಂಗಡಿ ಸುವರ್ಣ ಆರ್ಕೇಡ್ ಗೆ ಸ್ಥಳಾಂತರ

Article Image

ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಬೆಳ್ತಂಗಡಿ ಸುವರ್ಣ ಆರ್ಕೇಡ್ ಗೆ ಸ್ಥಳಾಂತರ

ಬೆಳ್ತಂಗಡಿ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ (ನಿ)ವು ರಾಜ್ಯ ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ಈ ವರೆಗೆ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಸುವರ್ಣ ಆರ್ಕೇಡ್ ಕಟ್ಟಡಕ್ಕೆ ಇಂದು ಸ್ಥಳಾಂತರಗೊಂಡಿತು . ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ.ರವರು ಸಹಕಾರಿ ಸಂಘದ ಅಧ್ಯಕ್ಷರಾದ ಡಾ.ಕೆ. ಜಯಕೀರ್ತಿ ಜೈನ್‌ರವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಪರಮೇಶ್ ಟಿ., ಚಂದ್ರಶೇಖರ್, ರತ್ನಾವತಿ, ಪ್ರಶಾಂತ ಕುಮಾರ್, ಹರಿಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವತ್ಸಲಾ ಜ್ಯೋತಿರಾಜ್, ಶಾಖಾ ವ್ಯವಸ್ಥಾಪಕ ಪಿ. ಅತಿಶಯ್ ಜೈನ್, ಮುಖ್ಯ ಪಶು ವೈದ್ಯಾಧಿಕಾರಿ ಡಾ| ರವಿ ಕುಮಾರ್, ಸಬ್ ರಿಜಿಸ್ಟ್ರಾರ್ ನಾಗರಾಜ್, ಸಿಬ್ಬಂದಿಗಳಾದ ವಿಶಾಲ, ನಿತಿನ್ ಹಾಗೂ ನಿತ್ಯನಿಧಿ ಠೇವಣಿ ಸಂಗ್ರಾಹಕರು ಉಪಸ್ಥಿತರಿದ್ದರು..ಸಹಕಾರಿ ಸಂಘದ ಸಲಹೆಗಾರರಾದ ವಸಂತ ಸುವರ್ಣರವರು ಸ್ವಾಗತಿಸಿ, ಉಪಾಧ್ಯಕ್ಷರಾದ ಚಿದಾನಂದ ಎಸ್. ಹೂಗಾರ್‌ರವರು ವಂದಿಸಿದರು. ಈ ಸಹಕಾರಿ ಸಂಘದಲ್ಲಿ ಇ-ಸ್ಟ್ಯಾಂಪಿಂಗ್ , ಕಲರ್ ಝೆರಾಕ್ಸ್,, ಝೆರಾಕ್ಸ್,, ಆಯುಷ್ಮಾನ್ ಹೆಲ್ತ್ ಕಾರ್ಡ್, ಪಹಣಿ ಪತ್ರ, ಎಲ್ಲಾ ಬಗೆಯ ಸ್ಟೇಷನರಿಗಳು ಮಿತ ದರದಲ್ಲಿ ದೊರೆಯುವ ಸೌಲಭ್ಯಗಳು ಇರುತ್ತದೆ.

ನಾಳೆಯಿಂದ ಪುತ್ತೂರು ವಾರ್ಷಿಕ ಜಾತ್ರೆ ಆರಂಭ

Article Image

ನಾಳೆಯಿಂದ ಪುತ್ತೂರು ವಾರ್ಷಿಕ ಜಾತ್ರೆ ಆರಂಭ

ಪುತ್ತೂರು, ಎ.9: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆ ಎ.10 ರಿಂದ ಪ್ರಾರಂಭಗೊಳ್ಳಲಿದ್ದು, ಎ.20ರ ತನಕ ನಡೆಯಲಿದೆ. 10 ದಿನಗಳ ಜಾತ್ರೆಯ ಸಂದರ್ಭದಲ್ಲಿ ದೇವರು ದಶ ದಿಕ್ಕುಗಳಿಗೆ ಪೇಟೆ ಸವಾರಿ ತೆರಳಿ ಭಕ್ತರ ಕಟ್ಟೆ ಪೂಜೆ ಸೇವೆಯನ್ನು ಸ್ವೀಕರಿಸಲಿದ್ದಾರೆ. 10 ದಿನಗಳ ಕಾಲ ಪೇಟೆ ಸವಾರಿ ನಡೆಯುವ ಜಾತ್ರೆ ಪುತ್ತೂರಿನಲ್ಲಿ ಮಾತ್ರವಾಗಿದ್ದು, ದ.ಕ. ಜಿಲ್ಲೆಯ ಮಟ್ಟಿಗೆ ಇದು ಧಾರ್ಮಿಕ ಚರಿತ್ರೆ. ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು, ಪಲ್ಲಕಿ ಉತ್ಸವ, ಸಣ್ಣ ರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ, 157 ಕಟ್ಟೆಪೂಜೆ, 12 ಕಿ.ಮೀ. ದೂರದ ವೀರಮಂಗಲಕ್ಕೆ ಅವಭೃತಸ್ನಾನ, ದೈವಗಳ ನೇಮದ ಸಂಭ್ರಮಕ್ಕೆ ಪುತ್ತೂರಿನ ಸೀಮೆ ಸಜ್ಜಾಗಿದೆ.

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ: ವಾರ್ಷಿಕ ಮಹಾಸಭೆ, ಹಿರಿಯ ನಾಗರಿಕರಿಗೆ ಸನ್ಮಾನ

Article Image

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ: ವಾರ್ಷಿಕ ಮಹಾಸಭೆ, ಹಿರಿಯ ನಾಗರಿಕರಿಗೆ ಸನ್ಮಾನ

ಉಜಿರೆ: ಸಂಘದ ಸದಸ್ಯರಾದ ಅಚ್ಚಿನಡ್ಕ ವೀರಮ್ಮನವರು ಬೆಳ್ತಂಗಡಿಯಲ್ಲಿ ಕೆಲ್ಲಗುತ್ತು ಪರಿಸರದಲ್ಲಿ ಉದಾರ ಕೊಡುಗೆಯಾಗಿ ನೀಡಿದ ಹತ್ತು ಸೆಂಟ್ಸ್ ನಿವೇಶನದಲ್ಲಿ ಒಂದು ವರ್ಷದೊಳಗೆ ಸುಸಜ್ಜಿತ ನೂತನ ಕಟ್ಟಡ ನಿರ್ಮಿಸಿ ಉದ್ಘಾಟನಾ ಸಮಾರಂಭವನ್ನು ವೈಭವದಿಂದ ಆಯೋಜಿಸಲಾಗುವುದು ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಬಿ. ವಿಠಲ ಶೆಟ್ಟಿ ಹೇಳಿದರು. ಅವರು ಇತ್ತೀಚೆಗೆ ಬೆಳ್ತಂಗಡಿಯ ರಾಜ್ಯ ಸರ್ಕಾರಿ ನೌಕರರ ಸಭಾಭವನದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಮಟ್ಟದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಪ್ರಕಟಿಸಿದರು. ಸಂಘದ ಹಿರಿಯ ಸದಸ್ಯರುಗಳಾದ ಎಂ. ಕೆ. ಆರಿಗ, ಮಹಾಬಲ ಹೆಗ್ಡೆ, ಲಲಿತ, ಬಾಬುಗೌಡ, ಆಗ್ನೇಸ್ ಡೇಸಾ, ದೇವಪ್ಪ ಗೌಡ, ಪ್ರೊ. ಕೆ. ವಿಷ್ಣುಮೂರ್ತಿ ಭಟ್, ವಿಕ್ಟರ್ ಮೊರಾಸ್, ನಿವೃತ್ತ ಉಪನ್ಯಾಸ ಸುಬ್ರಹ್ಮಣ್ಯ ಮಧ್ಯಸ್ತ, ಸೋಮನಾಥ ಮಯ್ಯ ಅಳದಂಗಡಿ, ಜುಲಿಯಾನಾ ಲೋಬೊ, ಪ್ರೊ. ಉದಯಕುಮಾರ ಮಲ್ಲ, ಬೆಳ್ತಂಗಡಿ, ಬಾಬು ಪೂಜಾರಿ ಕೆದ್ದು, ರಾಮ ಕಾರಂತ ಉಜಿರೆ, ಬಾಬು ಗೌಡ ಮುಂಡಾಜೆ ಮೊದಲಾದರನ್ನು ಗೌರವಿಸಲಾಯಿತು. ಇತ್ತೀಚೆಗೆ ನಿಧನರಾದ ಪ್ರೊ. ನಾ’ವುಜಿರೆ ಅವರಿಗೆ ಆರ್. ಯನ್. ಪೂವಣಿ ಹಾಗೂ ನಿವೃತ್ತ ಶಿಕ್ಷಕ ಜಯರಾಜ ಕಾಡ ಕುತ್ಲೂರು ಅವರಿಗೆ ವಸಂತರಾವ್ ನುಡಿನಮನ ಸಲ್ಲಿಸಿದರು. ಕೋಶಾಧಿಕಾರಿ ಜಗನ್ನಿವಾಸ ರಾವ್ ಮತ್ತು ಉಪಾಧ್ಯಕ್ಷರಾದ ಕುಸುಮಾವತಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪದ್ಮಕುಮಾರ್ ವರದಿ ಸಾದರಪಡಿಸಿದರು. ಸಂಘದ ಉಪಾಧ್ಯಕ್ಷ ಸನ್ಮತ್ ಕುಮಾರ್ ನಾರಾವಿ ಸ್ವಾಗತಿಸಿದರು. ಪದ್ಮಕುಮಾರ್ ಧನ್ಯವಾದವಿತ್ತರು.

ಓಡೀಲು: ಇಂದಿನಿಂದ ಬ್ರಹ್ಮಕಲಶೋತ್ಸವ

Article Image

ಓಡೀಲು: ಇಂದಿನಿಂದ ಬ್ರಹ್ಮಕಲಶೋತ್ಸವ

ಬೆಳ್ತಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಕಕಲಶೋತ್ಸವ ಮತ್ತು ಜಾತ್ರೋತ್ಸವದ ಕಾರ್ಯಕ್ರಮಗಳು ವೇದಮೂರ್ತಿ ಉದಯ ಪಾಂಗಣ್ಣಾಯರ ನೇತೃತ್ವದಲ್ಲಿ ಏ.8ರಿಂದ ಆರಂಭವಾಗಲಿವೆ. ಧಾರ್ಮಿಕ ಕಾರ್ಯಕ್ರಮಗಳು: ಸಂಜೆ 4 ಗಂಟೆಗೆ ಮಹಾದ್ವಾರ ಉದ್ಘಾಟನೆ, ಹೊರೆ ಕಾಣಿಕೆಯ ಶೋಭಾಯಾತ್ರೆ, ಉಗ್ರಾಣ ಮುಹೂರ್ತ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 7.30ಕ್ಕೆ ಜರುಗುವ ಸಭಾ ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಉದ್ಘಾಟಿಸಲಿದ್ದಾರೆ. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸಲಿದ್ದು, ಇತರ ಗಣ್ಯರು ಭಾಗವಹಿಸುವರು. ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿವೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವ ಎಲ್‌ಐಸಿಯಿಂದ 333 ವಿಮಾ ಗ್ರಾಮ ಘೋಷಣೆ

Article Image

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವ ಎಲ್‌ಐಸಿಯಿಂದ 333 ವಿಮಾ ಗ್ರಾಮ ಘೋಷಣೆ

ಬೆಳ್ತಂಗಡಿ, ಎ. 6: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಯವರ ಪರಿಕಲ್ಪನೆಯಂತೆ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಲ್ಲಿ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ)ದಿಂದ ರಾಜ್ಯದಾದ್ಯಂತ 333 ವಿಮಾ ಗ್ರಾಮಗಳನ್ನು ಗುರುತಿಸಿ 1,22,88,016 ರೂ. ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಸಂಸ್ಥೆಯ ಸಿಇಒ ಡಾ| ಎಲ್. ಎಚ್. ಮಂಜುನಾಥ್ ತಿಳಿಸಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಮತ್ತು ಅವರ ಕುಟುಂಬಗಳಿಗೆ ವಿಮಾ ಭದ್ರತೆ ನೀಡುವ ಕೆಲಸವನ್ನು ಕಳೆದ ಎರಡು ದಶಕಗಳಿಂದ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದ 23,27,650 ಮಂದಿ ಇದರ ಲಾಭ ಪಡೆದಿದ್ದಾರೆ. ಈ ಮಧ್ಯೆ ಮೈಕ್ರೋಬಚತ್ ಪಾಲಿಸಿಯಡಿ ವಿಮಾ ಗ್ರಾಮಗಳನ್ನು ಗುರುತಿಸುವ ವಿಶೇಷ ಕಾರ್ಯವನ್ನು ಎಲ್‌ಐಸಿ ಮಾಡುತ್ತಿದ್ದು, ರಾಜ್ಯಾದ್ಯಂತ 13,71,000 ಮಂದಿಗೆ ಈ ಪಾಲಿಸಿ ಮಾಡಲಾಗಿದೆ. 'ಏನಿದು ವಿಮಾ ಗ್ರಾಮ? ಅಲ್ಲಿ ಮಾಡಲಾದ ಮೈಕ್ರೋಬಚತ್ ಪಾಲಿಸಿಯ ಆಧಾರದಲ್ಲಿ ವಿಮಾ ಗ್ರಾಮಗಳನ್ನು ಎಲ್‌ಐಸಿ ಗುರುತಿಸುತ್ತದೆ. 2019ರಿಂದ ರಾಜ್ಯಾದ್ಯಂತ 333 ವಿಮಾ ಗ್ರಾಮಗಳನ್ನು ಗುರುತಿಸಲಾಗಿದೆ. ಆಯ್ಕೆಯಾದ ಗ್ರಾಮಗಳಿಗೆ ಒಂದು ಘಟಕಕ್ಕೆ 35,000ರಿಂದ 1 ಲಕ್ಷ ರೂ. ವರೆಗಿನ ವೆಚ್ಚದಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕ ವಿಷು ಜಾತ್ರೋತ್ಸವ

Article Image

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕ ವಿಷು ಜಾತ್ರೋತ್ಸವ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ವಿಷು ಜಾತ್ರಾ ಮಹೋತ್ಸವವು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಏ.13ರಿಂದ 23ರವರೆಗೆ ನಡೆಯಲಿದೆ. ಏ.13ರ ಮೇಷ ಸಂಕ್ರಮಣದಂದು ರಾತ್ರಿ ಧ್ವಜಾರೋಹಣ, ಏ.14 ರಂದು ಸೌರಮಾನ (ವಿಷು) ಯುಗಾದಿ, ಧರ್ಮ ನೇಮ, ಏ.15ರಂದು ಅಣ್ಣಪ್ಪ ದೈವದ ನೇಮ, ಶ್ರೀ ಮಂಜುನಾಥ ಸ್ವಾಮಿ ಉತ್ಸವ, ಏ.16ರಂದು ಶ್ರೀ ಮಂಜುನಾಥ ಸ್ವಾಮಿಯ ಉತ್ಸವ, ಏ. 17ರಂದು ಬೈಗಿನ ಬಲಿ ಹೊರಡುವುದು, ಹೊಸಕಟ್ಟೆ ಉತ್ಸವ, ಏ.18ರಂದು ಕಂಚಿಮಾರುಕಟ್ಟೆ ಉತ್ಸವ, ಏ.19ರಂದು ಲಲಿತೋದ್ಯಾನವನ ಕಟ್ಟೆ ಉತ್ಸವ, ಏ.20ರಂದು ಕೆರೆಕಟ್ಟೆ ಉತ್ಸವ, ಏ.21ರಂದು ಗೌರಿಮಾರುಕಟ್ಟೆ ಉತ್ಸವ, ಚಂದ್ರಮಂಡಲ ರಥೋತ್ಸವ, ಏ.22ರಂದು ರಾತ್ರಿ ಶ್ರೀಮನ್ಮಹಾ ರಥೋತ್ಸವ, ಏ.23ರಂದು ನೇತ್ರಾವತಿ ನದಿಯಲ್ಲಿ ಶ್ರೀ ದೇವರ ಅವಭೃತ ಸ್ನಾನ ಹಾಗೂ ರಾತ್ರಿ ಧ್ವಜಾವರೋಹಣ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ವಿಷು ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ಏಪ್ರಿಲ್ 1 ರಿಂದ ಮತ್ತೆ ಹೊಸ ಪಡಿತರ ಚೀಟಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

Article Image

ಏಪ್ರಿಲ್ 1 ರಿಂದ ಮತ್ತೆ ಹೊಸ ಪಡಿತರ ಚೀಟಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

ಬೆಂಗಳೂರು: ಸರ್ಕಾರ ಏಪ್ರಿಲ್ 1 ರಿಂದ ಮತ್ತೆ ಹೊಸ ಪಡಿತರ ಚೀಟಿಗೆ ಆನ್ ಲೈನ್ ಮೂಲಕ ಅರ್ಜಿ ಹಾಕಲು ಅವಕಾಶ ನೀಡಿದೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ. ಎಚ್. ಮುನಿಯಪ್ಪ ತಿಳಿಸಿದ್ದಾರೆ. ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು : 1. ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು. 2. ಈಗಾಗಲೇ ಪಡಿತರ ಚೀಟಿಯನ್ನು ಹೊಂದಿರಬಾರದು. 3. ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. 4. ಕುಟುಂಬದ ಆದಾಯದ ಆಧಾರದ ಮೇಲೆ ಕುಟುಂಬಕ್ಕೆ ಯಾವ ಪಡಿತರ ಚೀಟಿಯನ್ನು ನೀಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. 5. ನೀವು https://ahara.kar.nic.in ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು: 1. ಮತದಾರರ ಗುರುತಿನ ಚೀಟಿ, 2. ವಯಸ್ಸಿನ ಪ್ರಮಾಣಪತ್ರ, 3. ಆಧಾರ್ ಕಾರ್ಡ್, 4.ಚಾಲನಾ ಪರವಾನಿಗೆ, 5. ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, 6. ಮೊಬೈಲ್ ನಂಬರ್, 7.ಸ್ವಯಂ ಘೋಷಿತ ಪ್ರಮಾಣಪತ್ರ.

ಧರ್ಮಸ್ಥಳ ಸಿರಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಸನ್ಮಾನ

Article Image

ಧರ್ಮಸ್ಥಳ ಸಿರಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಸನ್ಮಾನ

ಉಜಿರೆ: ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸೆನೆಟ್ ಸದಸ್ಯರಾಗಿ ಆಯ್ಕೆಯಾದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ ಅವರಿಗೆ ಅಭಿನಂದನಾ ಕಾರ್ಯಕ್ರಮ ಸಿರಿ ಕೇಂದ್ರ ಕಚೇರಿಯಲ್ಲಿ ಜರುಗಿತು. ಸಿರಿ ಬ್ರ್ಯಾಂಡ್ ರಾಯಭಾರಿ, ಚಲನಚಿತ್ರ ನಟ ರಮೇಶ್ ಅರವಿಂದ್ ಅಭಿನಂದಿಸಿ ಮಾತನಾಡಿ, “ಖಾವಂದರ ಆದರ್ಶ ತತ್ವವನ್ನು ಮೈಗೂಡಿಸಿಕೊಂಡಿರುವ ಜನಾರ್ದನ್ ಅವರು ಸದಾ ಕ್ರಿಯಾಶೀಲರಾಗಿದ್ದಾರೆ. ಇಂತಹ ಸಜ್ಜನಿಕೆ, ಸಹೃದಯವನ್ನು ಹೊಂದಿರುವ ವ್ಯಕ್ತಿ ಸಿರಿ ಸಂಸ್ಥೆಯ ಎಂಡಿಯಾಗಿರುವುದು ನಮ್ಮೆಲ್ಲರ ಸೌಭಾಗ್ಯ'' ಎಂದರು. ಕೊಡಗು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಅಶೋಕ್ ಅಲೂರು ಮತ್ತು ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ರೂಪಾ ಅಶೋಕ್ ಅಲೂರು ದಂಪತಿ ಉಪಸ್ಥಿತರಿದ್ದರು. ಸಿರಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ರಾಜೇಶ್ ಪೈ, ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ದನ ಮೋಗರಾಜ್ ಉಪಸ್ಥಿತರಿದ್ದರು. ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಸನ್ನ ಸ್ವಾಗತಿಸಿದರು. ಜೀವನ್ ಕುಮಾರ್ ನಿರೂಪಿಸಿದರು.

ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಿಗೆ ಸನ್ಮಾನ

Article Image

ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಿಗೆ ಸನ್ಮಾನ

ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಡಾ.ಕೆ. ಜಯಕೀರ್ತಿ ಜೈನ್ ಅವರು ಸರಕಾರಿ ಸೇವೆಯಿಂದ ನಿವೃತ್ತಿಯಾಗಿದ್ದು, ಸಹಕಾರಿ ಸಂಘದ ವತಿಯಿಂದ ಶನಿವಾರ ಸನ್ಮಾನಿಸಲಾಯಿತು. ಸಹಕಾರಿ ಸಂಘದ ಉಪಾಧ್ಯಕ್ಷ ಚಿದಾನಂದ ಎಸ್. ಹೂಗಾರ್ ಅಧ್ಯಕ್ಷತೆ ವಹಿಸಿದ್ದರು. ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್, ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಠಲ ಶೆಟ್ಟಿ ತಾಲೂಕು ಪಂಚಾಯಿತಿ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಸಿ. ಆರ್. ನರೇಂದ್ರ ಕುಮಾರ್ ಮಂಗಳೂರು, ಉದ್ಯಮಿ ನಾಣ್ಯಪ್ಪ ಪೂಜಾರಿ, ತಾಲೂಕು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಡಾ. ಚಂದ್ರಕಾಂತ್, ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರತಿಮಾ, ಕಾನೂನು ಸಲಹೆಗಾಲ ಶಶಿಕಿರಣ್ ಜೈನ್, ಪಶು ಸಂಗೋಪನಾ ಇಲಾಖೆಯ ಮುಖ್ಯ ಆಡಳಿತ ಪಶು ವೈದ್ಯಾಧಿಕಾರಿ ಡಾ.ರವಿ ಕುಮಾರ್ ಉಪಸ್ಥಿತರಿದ್ದರು. ನಿತ್ಯ ನಿಧಿ ಠೇವಣಿ ಸಂಗ್ರಾಹಕರು ಹಾಗೂ ಸಂಘ ಸಂಸ್ಥೆಗಳಿಂದ ಅಭಿನಂದನೆ ನಡೆಯಿತು. ನಿರ್ದೇಶಕರಾದ ಜಯರಾಜ್ ಜೈನ್, ಅಬ್ದುಲ್ ರಝಾಕ್, ಆರತಿ, ವಾರಿಜಾ ಕೆ., ಪ್ರಶಾಂತ್ ಕುಮಾರ್, ಪರಮೇಶ್ ಟಿ., ರತ್ನಾವತಿ, ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ವತ್ಸಲಾ ಜ್ಯೋತಿ ರಾಜ್, ಶಾಖಾ ಪ್ರಬಂಧಕ ಅತಿಶಯ್ ಜೈನ್, ವಿಶಾಲಾ, ನ್ಯಾಯವಾದಿ ಶಿವಯ್ಯ, ಸಾಲ ವಸೂಲಾತಿಗಾರ ನಿರ್ಮಲ್ ಕುಮಾರ್ ಜೈನ್, ಸಲಹೆಗಾರ ವಸಂತ ಸುವರ್ಣ ಭಾಗವಹಿಸಿದ್ದರು. ಚಂದ್ರಶೇಖರ ಸ್ವಾಗತಿಸಿದರು. ನಿರ್ದೇಶಕಿ ಹೇಮಲತಾ ವಂದಿಸಿದರು. ಶಿಕ್ಷಣ ಇಲಾಖೆಯ ಸಿಆರ್‌ಪಿ ರಾಜೇಶ್ ನಿರೂಪಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬೆಂಗಳೂರಿನ ಸೆಲ್ಕೊ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಮಹಿಳಾ

Article Image

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬೆಂಗಳೂರಿನ ಸೆಲ್ಕೊ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಮಹಿಳಾ

ಧರ್ಮಸ್ಥಳ, ಮಾ.16: ಮಹಿಳೆಯರು ಮನೆ ಮತ್ತು ಮನ ಬೆಳಗುವ ಸೂರ್ಯನಂತೆ ಸದಾ ಪ್ರಕಾಶಮಾನವಾಗಿರುತ್ತಾರೆ. ಮಹಿಳೆಯರು ಮನಸ್ಸು ಮಾಡಿದರೆ ಏನೂ ಮಾಡಬಲ್ಲರು. ಅವರ ಶ್ರಮದ ಫಲ ಎಲ್ಲರಿಗೂ ಹಂಚಿ ಹೋಗುತ್ತದೆ. ಮಹಿಳೆಯರು ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದು ಸ್ವ-ಉದ್ಯೋಗದಿಂದ ಮಹಿಳೆಯರ ಆತ್ಮ, ವಿಶ್ವಾಸ, ಗೌರವ ಹೆಚ್ಚಾಗುತ್ತದೆ ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು. ಅವರು ಶನಿವಾರ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬೆಂಗಳೂರಿನ ಸೆಲ್ಕೊ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಮಹಿಳಾ ಉದ್ಯಮಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸೂಕ್ಷ್ಮಮತಿಗಳಾಗಿದ್ದು ಸಂಸಾರ, ವ್ಯವಹಾರ ಮತ್ತು ಸ್ವ-ಉದ್ಯೋಗವನ್ನು ಜಾಣ್ಮೆಯಿಂದ ಹಾಗೂ ಸಮನ್ವಯದಿಂದ ನಿಭಾಯಿಸಿ ತಮಗೆ ಸಿಗುವ ಅವಕಾಶದ ಸದುಪಯೋಗ ಪಡೆದು ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗುತ್ತಾರೆ. ಮಹಿಳೆಯರನ್ನು ಎಲ್ಲರೂ ನಂಬುತ್ತಾರೆ. ಬಾಲ್ಯ ಮತ್ತು ವೃದ್ದಾಪ್ಯದಲ್ಲಿ ಎಲ್ಲರೂ ಪರಾವಲಂಬಿಗಳಾಗುತ್ತಾರೆ. ಆದುದರಿಂದ ಯೌವನದಲ್ಲಿ ಪರಿಶ್ರಮಪಟ್ಟು ಸಂಪಾದನೆ ಮಾಡಬೇಕು. ಮಹಿಳೆಯರನ್ನು ಮದುವೆಗಾಗಿ ಬೆಳೆಸದೆ, ಉತ್ತಮ ಶಿಕ್ಷಣ, ಉದ್ಯೋಗ ಮತ್ತು ಸಂಸ್ಕಾರ ನೀಡಿ ಸಾರ್ಥಕ, ಸ್ವಾವಲಂಬಿ ಜೀವನಕ್ಕಾಗಿ ಬೆಳೆಸಬೇಕು ಎಂದು ಹೇಮಾವತಿ ವೀ. ಹೆಗ್ಗಡೆಯವರು ಸಲಹೆ ನೀಡಿದರು. ಸ್ವ-ಸಹಾಯ ಸಂಘಗಳು ಹಾಗೂ ಸೌರಶಕ್ತಿ ಬಳಕೆಯಲ್ಲಿಯೂ ಮಹಿಳೆಯರ ಸೇವೆ-ಸಾಧನೆಯನ್ನು ಅವರು ಶ್ಲಾಘಿಸಿ, ಅಭಿನಂದಿಸಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಸೌರಶಕ್ತಿ ಅಪಾರ ಶಕ್ತಿಯ ಮೂಲವಾಗಿದ್ದು ಎಲ್ಲರೂ ಪ್ರಯೋಗಶೀಲರಾಗಿ, ಸಂಶೋಧಕರಾಗಿ ಹೊಸ ಆವಿಷ್ಕಾರಗಳನ್ನು ಮಾಡಿ ಸೌರಶಕ್ತಿಯ ಸದುಪಯೋಗ ಮಾಡಬೇಕು. ಗ್ರಾಮೀಣ ಪ್ರದೇಶಗಳ ಜನರು ಕೂಡಾ ಅನೇಕ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ ಎಂದು ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದರು. ಯಶಸ್ವಿ ಮಹಿಳಾ ಉದ್ಯಮಿಗಳ ಪರವಾಗಿ ಹುಬ್ಬಳ್ಳಿಯ ರೂಪಾ ರೆಡ್ಡಿ ಮತ್ತು ಬೆಳಗಾವಿಯ ಪ್ರಮೋದ್ ಮೋದಿ ತಮ್ಮ ಸಾಧನೆಯ ಅನುಭವವನ್ನು ಹಂಚಿಕೊಂಡರು. ಸ್ವಾಮಿವಿವೇಕಾನಂದ ಯುವಚಳವಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸವಿತಾ ಸುಳುಗೋಡು ಮಾತನಾಡಿ, ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಬಲೀಕರಣಗೊಂಡಾಗ ಮಾತ್ರ ಸ್ವಾವಲಂಬಿ ಜೀವನ ಸಾಧ್ಯವಾಗುತ್ತದೆ. ಪ್ರಸ್ತುತ 1000 ಪುರುಷರಿದ್ದಲ್ಲಿ 914 ಮಹಿಳೆಯರು ಮಾತ್ರ ಇದ್ದಾರೆ. ಹೆಣ್ಣುಭ್ರೂಣಹತ್ಯೆ ತಡೆದು ಲಿಂಗತಾರತಮ್ಯ ನಿವಾರಣೆಯಾಗಬೇಕು ಎಂದು ಅವರು ಸಲಹೆ ನೀಡಿದರು. ಉದ್ಘಾಟಕರಾದ ಹೇಮಾವತಿ ವೀ. ಹೆಗ್ಗಡೆಯವರ ಭಾಷಣದ ಮಾಹಿತಿ, ಮಾರ್ಗದರ್ಶನದ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಸೆಲ್ಕೊ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಹಂದೆ, ಇತರ ಭಾಷೆಗಳಿಗೂ ಅದನ್ನು ಅನುವಾದ ಮಾಡಿ ಪ್ರಕಟಿಸುವುದಾಗಿ ಭರವಸೆ ನೀಡಿದರು. ಈಗ ಓದುವ ಹವ್ಯಾಸ ಕಡಿಮೆ ಇರುವುದರಿಂದ ಭಾಷಣದ ವೀಡಿಯೊ ಬುಕ್ ತಯಾರಿಸುವಂತೆ ಅವರು ಸಲಹೆ ನೀಡಿದರು. ಮುಂದಿನ ವರ್ಷ ಸೌರಶಕ್ತಿ ಬಳಕೆ ಬಗ್ಗೆ ಜಾಗತಿಕ ಸಮ್ಮೇಳನವನ್ನು ಧರ್ಮಸ್ಥಳದಲ್ಲಿ ಆಯೋಜಿಸುವುದಾಗಿ ಅವರು ಭರವಸೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್‌ಕುಮಾರ್, ಎಸ್.ಎಸ್. ಉಪಸ್ಥಿತರಿದ್ದರು. ಸೆಲ್ಕೊ ಸೋಲಾರ್ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೋಹನ್ ಭಾಸ್ಕರ ಹೆಗಡೆ ಸ್ವಾಗತಿಸಿದರು. ಸೌಮ್ಯ ಧನ್ಯವಾದವಿತ್ತರು. ಶ್ರೀನಿವಾಸ ಪೂಜಾರಿ, ಗುರುಪ್ರಸಾದ್ ಮತ್ತು ಪ್ರಸನ್ನ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

ಆಳ್ವಾಸ್ ವಿದ್ಯಾರ್ಥಿ ವೇತನಕ್ಕೆ ಪ್ರವೇಶ ಪರೀಕ್ಷೆ

Article Image

ಆಳ್ವಾಸ್ ವಿದ್ಯಾರ್ಥಿ ವೇತನಕ್ಕೆ ಪ್ರವೇಶ ಪರೀಕ್ಷೆ

ಮಂಗಳೂರು, ಮಾ. 15: ನಾಲ್ಕು ದಶಕಗಳಿಂದ ನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಈ ಬಾರಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಎರಡು ವರ್ಷಗಳಿಗೆ 10 ಕೋ.ರೂ. ಗಳಿಗೂ ಅಧಿಕ ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿ ವೇತನ ಘೋಷಿಸಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಎಸೆಸೆಲ್ಸಿಯಲ್ಲಿ ಸಿಬಿಎಸ್‌ಸಿ, ಐಸಿಎಸ್‌ಇ ಹಾಗೂ ರಾಜ್ಯ ಪಠ್ಯಕ್ರಮ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪರೀಕ್ಷೆಯನ್ನು ಬರೆಯಬಹುದು ಎಂದರು. ಗಣಿತ, ವಿಜ್ಞಾನ ಹಾಗೂ ಸಾಮಾನ್ಯ ಸಾಮರ್ಥ್ಯ ಕುರಿತು 100 ನಿಮಿಷಗಳ ಪರೀಕ್ಷೆಯು ಮಾ. 31ರಂದು ಸಿಬಿಎಸ್‌ಸಿ ಮತ್ತು ಐಸಿಎಸ್‌ಇ ಹಾಗೂ ಎ. 14ರಂದು ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಮೂಡುಬಿದಿರೆಯ ವಿದ್ಯಾಗಿರಿ ಸುಂದರಿ ಆಳ್ವ ಆವರಣದ ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಮಾಧ್ಯಮದಲ್ಲಿ ಪ್ರಶ್ನೆಪತ್ರಿಕೆ ಇರಲಿದೆ. ಸಿಬಿಎಸ್‌ಸಿ ಮತ್ತು ಐಸಿಎಸ್‌ಇ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾ. 28 ಕೊನೆಯ ದಿನಾಂಕವಾಗಿದ್ದು, ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ಎ. 10ರ ವರೆಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. https:// scholarship.Alvas.org/PUC/login. php ಮೂಲಕ ಅರ್ಜಿ ಸಲ್ಲಿಸಬಹುದು ಎಂದರು. ಪ್ರವೇಶ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದ ವಿದ್ಯಾರ್ಥಿಗಳು ದೇಶದಲ್ಲೇ ಅತ್ಯುತ್ತಮ ಹಾಗೂ ಅನನ್ಯ ಮಾದರಿಯ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಪ.ಪೂ. ಕಾಲೇಜಿನಲ್ಲಿ ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗದಲ್ಲಿ ಪದವಿಪೂರ್ವ ಶಿಕ್ಷಣ ಪಡೆಯಲು ಅರ್ಹರಾಗಿರುತ್ತಾರೆ ಎಂದರು. ಪ್ರವೇಶ ಪರೀಕ್ಷೆಯ ಅಂಕದ ಆಧಾರದ ಮೇಲೆ ಆಯ್ಕೆಯ ಜತೆಯಲ್ಲಿ ಪ್ರತ್ಯೇಕವಾಗಿ ಪ್ರತೀ ವರ್ಷದಂತೆ ಎಸೆಸೆಲ್ಸಿ ಅಂಕವನ್ನು ಪರಿಗಣಿಸಿ, ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆಯ ಮೇಲೂ ಆಯ್ಕೆಗಳು ನಡೆಯುತ್ತವೆ. ಮಕ್ಕಳಿಗೆ ಅರ್ಹತೆಯ ಆಧಾರದಲ್ಲಿ ಅತ್ಯುನ್ನತ ಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಆಶಯದೊಂದಿಗೆ ಈ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.

ಇಂದಿನಿಂದ ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ವರ್ಷಾವಧಿ ಜಾತ್ರೆ

Article Image

ಇಂದಿನಿಂದ ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ವರ್ಷಾವಧಿ ಜಾತ್ರೆ

ಬೆಳ್ತಂಗಡಿ: ಪಡ್ಯಾರಬೆಟ್ಟ ಪೆರಿಂಜೆಯ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯು ಇಂದಿನಿಂದ ಪ್ರಾರಂಭಗೊಂಡು 19ರವರೆಗೆ ನಡೆಯಲಿದೆ. ಇಂದು ಮಧ್ಯಾಹ್ನ ಪೆರಿಂಜೆ ಶ್ರೀ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ದೇವರಿಗೆ ಪಂಚಾಮೃತಾಭಿಷೇಕ, ಶ್ರೀ ಅಮ್ಮನವರಿಗೆ ವರಹ ಪೂಜೆ, ಪಡ್ಯೋಡಿ ಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, ಧ್ವಜಾರೋಹಣ, ಬಲಿ, ಚೆಂಡು ನಡೆಯಲಿದೆ. ಮಾ.15ರಂದು ಭೂತಬಲಿ ಉತ್ಸವ, ಮಾ.16ರಂದು ಅಂಬೋಡಿ, ಬಲಿ, ಹೂವಿನ ಪೂಜೆ, ರಥಾರೋಹಣ ನಡೆಯಲಿದೆ. ಮಾ.17ರಂದು ವರ್ಷಾವಧಿ ಜಾತ್ರೋತ್ಸವ, ಮಧ್ಯಾಹ್ನ 12ರಿಂದ ರಥದಲ್ಲಿ ಮಹಾಪೂಜೆ, ರಥೋತ್ಸವ, ಹೂವಿನ ಪೂಜೆ, 1.30 ರಿಂದ ಮಹಾ ಅನ್ನಸಂತರ್ಪಣೆ, ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ ಜರುಗಲಿದೆ. ಮಾ.18ರಂದು ಧ್ವಜಾವರೋಹಣ, ಸಂಪ್ರೋಕ್ಷಣೆ,ಪಡ್ಯೋಡಿಗುತ್ತಿಗೆ ಭಂಡಾರ ಹಿಂದಿರುಗಲಿದೆ. ಮಾ.19ರಂದು ರಾತ್ರಿ 7.30ರಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲಾಪಗಳು, ಹೂವಿನ ಪೂಜೆ, ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ, ತುಲಾಭಾರ ಸೇವೆ ನಡೆಯಲಿದೆ. ಪ್ರತಿ ಸಂಕ್ರಮಣ ಮತ್ತು ಜಾತ್ರಾ ಸಮಯದ 5 ದಿನಗಳಲ್ಲಿ ಅನ್ನಸಂತರ್ಪಣೆ ಸೇವೆ ನೆರವೇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮ: ಮಾ.16ರಂದು ಸಂಜೆ 6 ರಿಂದ 7.30ರವರೆಗೆ ತುಳಸಿ ಪೆಜತ್ತಾಯ ಮತ್ತು ಶಿಷ್ಯವೃಂದದವರಿಂದ 'ಭಕ್ತಿ-ಸಂಗೀತ' ಕಾರ್ಯಕ್ರಮ ನಡೆಯಲಿದೆ. ಮಾ.19ರಂದು ರಾತ್ರಿ 8ರಿಂದ ಕರಾವಳಿ ಕರ್ನಾಟಕದ ಪ್ರಖ್ಯಾತ ಕಲಾವಿದರಿಂದ 'ನಾದ ನಿನಾದ' ಸಂಗೀತ ರಸಸಂಜೆ ಕಾರ್ಯಕ್ರಮ ಜರುಗಲಿದೆ.

ಬೆಂಗಳೂರು: 10 ದಿನ ಎಸ್ಕಾಂ ಆನ್‌ಲೈನ್ ಸೇವೆ ಅಲಭ್ಯ

Article Image

ಬೆಂಗಳೂರು: 10 ದಿನ ಎಸ್ಕಾಂ ಆನ್‌ಲೈನ್ ಸೇವೆ ಅಲಭ್ಯ

ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಕಾರ್ಯ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಹತ್ತು ದಿನಗಳ ಕಾಲ ಮೆಸ್ಕಾಂ ಸಹಿತ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳ ಆನ್‌ಲೈನ್ ಸೇವೆಗಳು ಅಲಭ್ಯವಾಗಲಿದೆ. ಮಾರ್ಚ್ 10ರಿಂದ 19ರವರೆಗೆ ರಾಜ್ಯದ ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ನಗರ ಪ್ರದೇಶಗಳಲ್ಲಿ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ, ಹೆಸರು ಮತ್ತು ಜಕಾತಿ ಬದಲಾವಣೆ ಸಹಿತ ಯಾವುದೇ ಆನ್ ಲೈನ್ ಸೇವೆಗಳು ಇರುವುದಿಲ್ಲ. ನಿತ್ಯ ಸಾವಿರಾರು ಜನ ವಿದ್ಯುತ್‌ಗೆ ಸಂಬಂಧಿಸಿದ ಆನ್‌ಲೈನ್ ಸೇವೆಗಳನ್ನು ಪಡೆಯುತ್ತಿದ್ದು, ಅವರೆಲ್ಲರಿಗೂ ಇದರಿಂದ ಕೊಂಚ ಕಿರಿಕಿರಿ ಆಗಲಿದೆ. ಆದರೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ಎಸ್ಕಾಂಗಳು ಸ್ಪಷ್ಟಪಡಿಸಿವೆ. ಬಿಲ್ ತಂತ್ರಾಂಶವು ಕಾರ್ಯಾರಂಭಗೊಂಡ ಬಳಿಕ ಸ್ಥಿರಗೊಳ್ಳಲು ಸುಮಾರು 15 ದಿನಗಳ ಕಾಲಾವಕಾಶ ಬೇಕಿರುವುದರಿಂದ ಈ ಸಮಯದಲ್ಲಿ ತಂತ್ರಾಂಶದ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಮಟ್ಟದ ವ್ಯತ್ಯಯ ಉಂಟಾಗಬಹುದು. ಆದರೆ ಸಾಫ್ಟ್‌ವೇ‌ರ್ ಉನ್ನತೀಕರಣ ಸಂದರ್ಭದಲ್ಲಿ ವಿದ್ಯುತ್ ಪಾವತಿ ಸಾಧ್ಯವಾಗದ ಕಾರಣ, ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದಿಲ್ಲ.

ರಾಜ್ಯಸಭೆಗೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಆಯ್ಕೆ

Article Image

ರಾಜ್ಯಸಭೆಗೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಆಯ್ಕೆ

ಹೊಸದಿಲ್ಲಿ,ಮಾ.8: ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ರಾಷ್ಟ್ರಪತಿ ದ್ರೌಪದಿಮುರ್ಮ ಅವರು ಶುಕ್ರವಾರ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ದಿನದಂದೇ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದು, ಇದೊಂದು ಅನಿರೀಕ್ಷಿತ ಅಚ್ಚರಿ ಎಂದು ಸುಧಾಮೂರ್ತಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಸಂಗೀತ, ಸಾಹಿತ್ಯ, ಕಲೆ ಮತ್ತು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡ 12 ಮಂದಿಯನ್ನು ರಾಷ್ಟ್ರಪತಿ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುತ್ತಾರೆ. ಈ ವಿಭಾಗದಲ್ಲಿ ಸುಧಾಮೂರ್ತಿ ಆಯ್ಕೆಯಾಗಿದ್ದಾರೆ. ಇವರು ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಅವರ ಪತ್ನಿ.

ಫೆ. 13ರಿಂದ ಫೆ. 22: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Article Image

ಫೆ. 13ರಿಂದ ಫೆ. 22: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ. 13ರಿಂದ ಫೆ. 22ರ ವರೆಗೆ ನಡೆಯಲಿದ್ದು ಫೆ. 20ರಂದು ಶ್ರೀ ಮನ್ಮಹಾರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿರುವುದು ಎಂದು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆಲ್ಲಗುತ್ತು ಸಬ್ರಬೈಲು ಜಯವರ್ಮರಾಜ ಬಳ್ಳಾಲ್‌ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಅರಮಲೆಬೆಟ್ಟ: ಶ್ರೀ ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Article Image

ಅರಮಲೆಬೆಟ್ಟ: ಶ್ರೀ ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

ಬೆಳ್ತಂಗಡಿ ತಾಲೂಕು ಗುರುವಾಯನಕೆರೆ ಕುವೆಟ್ಟು ಗ್ರಾಮದ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ. 13ರಂದು ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿರುವುದು ಎಂದು ಅನುವಂಶಿಕ ಆಡಳಿತ ಮೋಕ್ತೇಸರರಾದ ಸುಖೇಶ್ ಕುಮಾರ್ ಕಡಂಬುರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಫೆ. 8 : ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಮಾವಿನಕಟ್ಟೆ ಶಾಖೆಯ ಉದ್ಘಾಟನೆ

Article Image

ಫೆ. 8 : ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಮಾವಿನಕಟ್ಟೆ ಶಾಖೆಯ ಉದ್ಘಾಟನೆ

ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ 3ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಎಲಿಯನಡುಗೋಡು ಗ್ರಾಮದ ಮಾವಿನಕಟ್ಟೆಯ ಚಾಮುಂಡೇಶ್ವರಿ ಕಾಂಪ್ಲೆಕ್ಸ್‌ನಲ್ಲಿ ಫೆ. 8ರಂದು ನಡೆಯಿತು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಈ ಸಂದರ್ಭದಲ್ಲಿ ಚಾಲನೆ ನೀಡಿ ಮಾತನಾಡುತ್ತಾ, ಸಹಕಾರಿ ಸಂಘಗಳು ಜನರಿಂದ, ಜನರಿಗಾಗಿ ಪ್ರಾಮಾಣಿಕತೆ, ವಿಶ್ವಾಸದಿಂದ ವ್ಯವಹಾರ ನಡೆಸುವ ಅತೀ ದೊಡ್ಡ ಹಣಕಾಸಿನ ಸಂಸ್ಥೆಯಾಗಿದೆ. ದೇಹದ ಅಂಗಗಳು ಪರಸ್ಪರ ಪೂರಕವಾಗಿ ಸಹಕಾರ ನೀಡುತ್ತಾ ಕಾರ್ಯ ನಿರ್ವಹಿಸಿದಂತೆ ಗ್ರಾಹಕರು ಮತ್ತು ಸಹಕಾರಿ ಸಂಘಗಳು ಪರಸ್ಪರ ಸಹಕಾರ ನೀಡಿದಾಗ ಜನ, ಸಂಘ ಹಾಗೂ ಊರಿನ ಅಭಿವೃದ್ಧಿಯಾಗುತ್ತದೆ ಎಂದರು. ಬಳಿಕ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ ಭಟ್ ಭದ್ರತಾ ಕೊಠಡಿ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ ಗಣಕಯಂತ್ರ ವ್ಯವಸ್ಥೆ ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್ ಡಿ'ಸೋಜಾ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಮಾಜಿ ಅಧ್ಯಕ್ಷ ಗೋಪಿನಾಥ್ ರೈ, ಕುಕ್ಕಿಪಾಡಿ ಗ್ರಾಪಂ, ಉಪಾಧ್ಯಕ್ಷೆ ಬೇಬಿ, ಸದಸ್ಯರಾದ ಯೋಗೀಶ್‌ ಆಚಾರ್ಯ, ಸುಜಾತ, ಲಿಂಗಪ್ಪ ಪೂಜಾರಿ, ಪ್ರತಿಭಾ ಶೆಟ್ಟಿ, ಪುಷ್ಪಾ, ಶೋಭ, ಚಂದ್ರ, ದಿನೇಶ್‌, ಗೀತಾ, ಪೂರ್ಣಿಮಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ, ನಿರ್ದೇಶಕರಾದ ಸಂದೇಶ್‌ ಶೆಟ್ಟಿ, ರಾಜೇಶ್‌ ಶೆಟ್ಟಿ, ಹರೀಶ್‌ ಆಚಾರ್ಯ, ದಿನೇಶ್‌ ಪೂಜಾರಿ, ದೇವರಾಜ್‌ ಸಾಲ್ಯಾನ್‌, ಜಾರಪ್ಪ ನಾಯ್ಕ, ಉಮೇಶ್‌ ಗೌಡ, ವೀರಪ್ಪ ಪರವ, ಅರುಣಾ ಎಸ್.‌ ಶೆಟ್ಟಿ, ವೃತ್ತಿಪರ ನಿರ್ದೇಶಕ ಮಾಧವ ಶೆಟ್ಟಿಗಾರ್‌, ಶಾಖಾ ಪ್ರಬಂಧಕ ಜೇಸನ್‌ ಫೆರ್ನಾಂಡಿಸ್‌ ಮುಂತಾದವರು ಉಪಸ್ಥಿತರಿದ್ದರು.

ಫೆ. 10-11 : ಮಲ್ಲಿಪ್ಪಾಡಿ ಶ್ರೀ ಸದಾಶಿವ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Article Image

ಫೆ. 10-11 : ಮಲ್ಲಿಪ್ಪಾಡಿ ಶ್ರೀ ಸದಾಶಿವ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಮಲ್ಲಿಪ್ಪಾಡಿ ಶ್ರೀ ಸದಾಶಿವ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ಶನಿಪೂಜೆಯು ಮುಂಡೂರು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಫೆ. 10 ಮತ್ತು 11ರಂದು ವಿವಿಧ ಧಾರ್ಮಿಕ ವಿಧಿ-ವಿಧಾನಗಳು, ದೈವಗಳ ನೇಮೋತ್ಸವದೊಂದಿಗೆ ಜರುಗಲಿರುವುದು ಎಂದು ಆಡಳಿತ ಮೊಕ್ತೇಸರರಾದ ಅಮರನಾಥ ಹೆಗ್ಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ. 1ರಿಂದ : ಮೂಡುಬಿದಿರೆ ಉತ್ಸವ ಮತ್ತು ಮ್ಯೂಸಿಕಲ್ ಡ್ಯಾನ್ಸಿಂಗ್ ವಾಟರ್ ಕೌಂಟರ್

Article Image

ಫೆ. 1ರಿಂದ : ಮೂಡುಬಿದಿರೆ ಉತ್ಸವ ಮತ್ತು ಮ್ಯೂಸಿಕಲ್ ಡ್ಯಾನ್ಸಿಂಗ್ ವಾಟರ್ ಕೌಂಟರ್

ಮೂಡುಬಿದಿರೆಯ ಶಾಲಿಮಾರ್ ಹಾಲ್ ಬಳಿ ನ್ಯಾಷನಲ್ ಅಮ್ಯೂಸ್‌ಮೆಂಟ್ ಪಾರ್ಕ್ ಇವರಿಂದ ಮೂಡುಬಿದಿರೆ ಉತ್ಸವ ಮತ್ತು ಮ್ಯೂಸಿಕಲ್ ಡ್ಯಾನ್ಸಿಂಗ್ ವಾಟರ್ ಕೌಂಟರ್ ಇಂದಿನಿಂದ (ಫೆ. 1) ಪ್ರಾರಂಭಗೊಳ್ಳಲಿದೆ. ಮೂಡುಬಿದಿರೆಯಲ್ಲಿ ಪ್ರಪ್ರಥಮ ಬಾರಿಗೆ ಈ ಉತ್ಸವ ನಡೆಯುತ್ತಿದ್ದು, ಶಾಪಿಂಗ್, ಗೃಹೋಪಯೋಗಿ ವಸ್ತುಗಳು, ಸಿದ್ಧ ಉಡುಪುಗಳು, ಮಹಿಳೆಯರ ಇಮಿಟೇಷನ್ ಜ್ಯುವೆಲ್ಲರಿಗಳು, ಮಕ್ಕಳ ಆಟದ ಸಾಮಾಗ್ರಿಗಳು, ಶುಚಿ ರುಚಿಯಾದ ತಿಂಡಿ ತಿನಿಸುಗಳು, ಪುಟಾಣಿಗಳಿಗಾಗಿ ಕಿಡ್ಸ್ ರೈಡ್ಸ್, ಬೃಹತ್ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಇನ್ನೂ ಅನೇಕ ಮನರಂಜನೆಗಳು ಅಭ್ಯವಿರುತ್ತದೆಯೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧರ್ಮಸ್ಥಳ, ಜ.30: ಹಸ್ತಪ್ರತಿಗಳ ಸಂಶೋಧನೆ ಕುರಿತು ಒಡಂಬಡಿಕೆ ಪತ್ರ ಹಸ್ತಾಂತರ

Article Image

ಧರ್ಮಸ್ಥಳ, ಜ.30: ಹಸ್ತಪ್ರತಿಗಳ ಸಂಶೋಧನೆ ಕುರಿತು ಒಡಂಬಡಿಕೆ ಪತ್ರ ಹಸ್ತಾಂತರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಗೌರವ ಉಪಸ್ಥಿತಿಯಲ್ಲಿ ಮಂಗಳವಾರ ಧರ್ಮಸ್ಥಳದಲ್ಲಿ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ಭಾರತೀಯ ಆಯುರ್ವಿಜ್ಞಾನ ಸಂಪದ ಸಂಸ್ಥಾನ, ಹೈದರಾಬಾದ್ ಮಧ್ಯೆ ಹಸ್ತಪ್ರತಿಗಳ ಸಂಶೋಧನೆ ಕುರಿತು ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿ ಒಪ್ಪಿಗೆ ಸೂಚಿಸಲಾಯಿತು. ಆಯುರ್ವಿಜ್ಞಾನ ಸಂಪದ ಸಂಸ್ಥಾನದ ಹೈದರಾಬಾದ್‌ನ ಸಹಾಯಕ ನಿರ್ದೇಶಕ ಡಾ. ಗೋಲಿ ಪೆಂಚಲ ಪ್ರಸಾದ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಸನದ ಪ್ರಾಂಶುಪಾಲರಾದ ಡಾ. ಪ್ರಸನ್ನ ಎನ್. ರಾವ್ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 22ನೇ ಶಾಖೆ ಪುರುಷರಕಟ್ಟೆಯಲ್ಲಿ ಶುಭಾರಂಭ

Article Image

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 22ನೇ ಶಾಖೆ ಪುರುಷರಕಟ್ಟೆಯಲ್ಲಿ ಶುಭಾರಂಭ

ಪುತ್ತೂರು: ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ' ಹಾಗೂ ರಾಜ್ಯ ಮಟ್ಟದ ‘ಉತ್ತಮ ಸಹಕಾರ ಸಂಘ ಪ್ರಶಸ್ತಿ' ಪುರಸ್ಕೃತಗೊಂಡ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು ಬೆಳ್ತಂಗಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, 22ನೇ ಶಾಖೆಯು ಜ. 28ರಂದು ನರಿಮೊಗರು ಗ್ರಾಮದ ಪುರುಷರಕಟ್ಟೆ ಸಿದ್ದಣ್ಣ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. ಕಾರ್ಯಕ್ರಮವನ್ನು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಉದ್ಘಾಟಿಸಿ ಮಾತನಾಡುತ್ತಾ, ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು ಅತೀ ಕಡಿಮೆ ಅವಧಿಯಲ್ಲಿ ರೂ. 1000 ಕೋಟಿ ವ್ಯವಹಾರ ನಡೆಸುವ ಗಣನೀಯ ಸಾಧನೆ ಮಾಡಿದೆ. ಬ್ಯಾಂಕ್ ಮುನ್ನಡೆಯಲು ಠೇವಣಿಗಾರರಗಿಂತ ಸಾಲಗಾರರೇ ಮುಖ್ಯ. ನೀಡಿದ ಸಾಲ ಮರುಪಾವತಿಸುವಲ್ಲಿ ಸಿಬ್ಬಂದಿಗಳ ಕಾರ್ಯದಕ್ಷತೆ, ಕ್ರಿಯಾಶೀಲತೆ ಪ್ರಮುಖವಾಗಿದೆ. ಈ ಸಂಘವು ಅಂತರಾಜ್ಯ ಸಂಸ್ಥೆಯಾಗಿ ಬೆಳೆಯಲಿ. ಪುತ್ತೂರಿನಲ್ಲಿ ಈಗಾಗಲೇ ಎರಡು ಶಾಖೆ ಪ್ರಾರಂಭವಾಗಿದ್ದು ಇನ್ನೂ 8 ಶಾಖೆಗಳು ಪ್ರಾರಂಭವಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ಮಾತನಾಡುತ್ತಾ, ನಮ್ಮ ಶಾಖೆಯ ಮುಖಾಂತರ ಗ್ರಾಹಕರಿಗೆ ಪ್ರಾಮಾಣಿಕ, ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತವನ್ನು ಸಿಬಂದಿಗಳ ಮೂಲಕ ನೀಡಲಾಗುವುದು ಎಂದು ಹೇಳಿದರು. ಕ್ರೀಡಾ ಕ್ಷೇತ್ರದ ಸಾಧಕರಾದ ದೀಕ್ಷಾ ಹಾಗೂ ಭವಿತ್ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಖೆಗೆ ಸ್ಥಳಾವಕಾಶ ನೀಡಿದ ಸಿದ್ದಣ್ಣ ಪ್ರಭು ಕಟ್ಟಡದ ಮಾಲಕ ನವೀನ್ ಪ್ರಭುರವರನ್ನು ಕಾರ್ಯಕ್ರಮದಲ್ಲಿ ಸನ್ಮಾಸಲಾಯಿತು. ಕಾರ್ಯಕ್ರಮದಲ್ಲಿ ಭದ್ರತಾ ಕೋಶ ಉದ್ಘಾಟಿಸಿದ ನರಿಮೊಗರು ಗ್ರಾ.ಪಂ. ಅಧ್ಯಕ್ಷೆ ಹರಿಣಿ ನಿತ್ಯಾನಂದ, ಗಣಕಯಂತ್ರ ವಿಭಾಗವನ್ನು ಉದ್ಘಾಟಿಸಿದ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನವೀನ್ ಡಿ., ನಿರಖು ಠೇವಣಿ ಪ್ರಮಾಣ ಪತ್ರ ವಿತರಿಸಿದ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್, ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ಸಂಘದ ವಿಶೇಷಾಧಿಕಾರಿ ಯಂ. ಮೋನಪ್ಪ ಪೂಜಾರಿ ಕಂಡೆತ್ಯಾರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರಿ ಹೊನ್ನಪ್ಪ ಶಾಂತಿಗೋಡು ಪ್ರಾರ್ಥಿಸಿ, ಸಂಘದ ಉಪಾಧ್ಯಕ್ಷ ಭಗೀರಥ ಜಿ. ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ ಕುಮಾರ್ ಹಾಗೂ ಕಡಬ ಶಾಖೆಯ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಆನಂದ ಪೂಜಾರಿ ಸರ್ವೆದೋಳ ವಂದಿಸಿದರು.

ಕಲ್ಲೇಗ: ಕಲ್ಕುಡ ದೈವದ ವಾರ್ಷಿಕ ಜಾತ್ರೋತ್ಸವ

Article Image

ಕಲ್ಲೇಗ: ಕಲ್ಕುಡ ದೈವದ ವಾರ್ಷಿಕ ಜಾತ್ರೋತ್ಸವ

ಪುತ್ತೂರು ಕಲ್ಲೇಗದಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಕಲ್ಕುಡ ದೈವದ ವಾರ್ಷಿಕ ಜಾತ್ರೋತ್ಸವವು ಜನವರಿ 24ರಂದು ಜರಗಲಿರುವುದು. ಬೆಳಗ್ಗೆ ಗಂಟೆ 9ಕ್ಕೆ ಕಾರ್ಜಾಲು ಗುತ್ತುವಿನಲ್ಲಿ ಸ್ಥಳ ಶುದ್ಧಿ ಹೋಮ ಮತ್ತು ಕಲಶ ಪ್ರತಿಷ್ಠೆ, ಬೆಳಗ್ಗೆ 11.30ಕ್ಕೆ ಶ್ರೀ ದೈವಸ್ಥಾನದಲ್ಲಿ ಗಣಹೋಮ ಮತ್ತು ಶ್ರೀ ದೈವಗಳ ತಂಬಿಲ ಮತ್ತು ನಾಗತಂಬಿಲ, ರಾತ್ರಿ ಗಂಟೆ 7.30ಕ್ಕೆ ಸರಿಯಾಗಿ ಶ್ರೀ ದೈವಗಳ ಮೂಲಸೆಳೆ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಟು ರಾತ್ರಿ 9.30ಕ್ಕೆ ಕಲ್ಕುಡ ದೈವದ ನೇಮೋತ್ಸವ ನಡೆಯಲಿದೆ.

ಮಿಜಾರು, ಎಡಪದವು : ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಬ್ರಹ್ಮ ಬೈದರ್ಕಳ ಗರಡಿಯ ವರ್ಷಾವಧಿ ನೇಮೋತ್ಸವ

Article Image

ಮಿಜಾರು, ಎಡಪದವು : ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಬ್ರಹ್ಮ ಬೈದರ್ಕಳ ಗರಡಿಯ ವರ್ಷಾವಧಿ ನೇಮೋತ್ಸವ

ಮಂಗಳೂರು ತಾಲೂಕಿನ ಮಿಜಾರು, ಎಡಪದವು ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ಬ್ರಹ್ಮ ಬೈದರ್ಕಳ ಗರಡಿಯ ವರ್ಷಾವಧಿ ನೇಮೋತ್ಸವವು ಇಂದಿನಿಂದ (ಜ. 23) ಪ್ರಾರಂಭಗೊಂಡು ಜನವರಿ 28ರ ವರೆಗೆ ನಡೆಯಲಿದೆ. 24ರಂದು ಎಡಪದವು ಗುತ್ತಿನಿಂದ ಭಂಡಾರ ಹೊರಟು 25ರಂದು ರಾತ್ರಿ ದೈವ ನೇಮ ಮತ್ತು 26ರಂದು ರಾತ್ರಿ ಶ್ರೀ ಕೊಡಮಣಿತ್ತಾಯ-ಕುಕ್ಕಿನಂತಾಯ ದೈವಗಳ ನೇಮೋತ್ಸವವು ನಡೆಯಲಿದೆ. 27ರಂದು ಸಂಜೆ 6:30ಕ್ಕೆ ಶ್ರೀ ಬ್ರಹ್ಮಬೈದರ್ಕಳ ನೇಮ ಮತ್ತು ರಾತ್ರಿ 2 ಗಂಟೆಗೆ ಮಾಣಿಬಾಲೆ ನೇಮೋತ್ಸವವು ನಡೆಯಲಿದೆ ಎಂದು ಆಡಳಿತ ಮೊಕ್ತೇಸರರಾದ ಕೆ. ಸನತ್ ಕುಮಾರ್ ಪಡಿವಾಳ್‌ರವರು ತಿಳಿಸಿರುತ್ತಾರೆ.

ಜ. 22-30 : ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ

Article Image

ಜ. 22-30 : ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ

ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ ಮತ್ತು ನೂತನ ಚಂದ್ರಮಂಡಲ ರಥ ಮತ್ತು ಪಲ್ಲಕ್ಕಿ ಸಮರ್ಪಣೆಯು ಜನವರಿ 22ರಿಂದ ಪ್ರಾರಂಭಗೊಂಡು 30ರವರೆಗೆ ನಡೆಯಲಿದೆ. ಸುಮಾರು 800 ವರ್ಷಗಳ ಇತಿಹಾಸವಿರುವ ಪ್ರಸಿದ್ಧ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದಲ್ಲಿದೆ. ವ್ಯಾಜ್ಯಗಳನ್ನು ಪರಿಹರಿಸಿ, "ತೀರ್ಪು" ನೀಡುವ ಸ್ಥಳವೆಂದೇ ಪ್ರತೀತಿ ಪಡೆದು ಮುಂದಕ್ಕೆ "ನ್ಯಾಯತೀರ್ಪು-ನ್ಯಾಯತರ್ಪು" ಎಂದಾಯಿತೆಂದು ಇಲ್ಲಿನ ಇತಿಹಾಸ. ನ್ಯಾಯತರ್ಪು, ಕಳಿಯ ಮತ್ತು ಓಡಿಲ್ನಾಳ ಗ್ರಾಮಗಳಲ್ಲದೆ ಹತ್ತಿರದ ಕಣಿಯೂರು, ಕೊಯ್ಯೂರು, ಕುವೆಟ್ಟು ಮತ್ತು ಮಚ್ಚಿನ ಗ್ರಾಮದ ಆಸುಪಾಸಿಗೂ ಶ್ರೀ ಕ್ಷೇತ್ರದ ವ್ಯಾಪ್ತಿ ಹಬ್ಬಿದೆ. ಊರ-ಪರವೂರಿನ ಭಕ್ತವೃಂದದ ಪರಿಶ್ರಮದಿಂದ ಶ್ರೀ ಕ್ಷೇತ್ರವು ಜೀರ್ಣೋದ್ಧಾರಗೊಂಡು, 2002ರಲ್ಲಿ ಪುನಃಪ್ರತಿಷ್ಠಾ-ಅಷ್ಟಬಂಧ ಬ್ರಹ್ಮಕಲಶದೊಂದಿಗೆ ನವೀಕರಣಗೊಂಡಿದೆ. ಕ್ಷೇತ್ರದ ಅಭಿವೃದ್ಧಿ ಮುಂದಿನ ಹಂತವಾಗಿ ಕ್ಷೇತ್ರದ ದೈವಗಳಾದ ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಗಳಿಗೆ ಮಾಡ್ಯಾರುಗುಡ್ಡೆಯಲ್ಲಿ ದೈವಸ್ಥಾನ ನಿರ್ಮಿಸಿ ಪ್ರತಿಷ್ಠೆ ಮಾಡಲಾಗಿದೆ. 2010ರಲ್ಲಿ ಕ್ಷೇತ್ರದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವಂತೆ ದಾಖಲೆ ಅವಧಿಯಲ್ಲಿ ನೂತನ ರಥ ಸಮರ್ಪಣೆ ಹಾಗೂ ಧ್ವಜಸ್ತಂಭದ ಪ್ರತಿಷ್ಠೆ ನಡೆದಿದೆ. ಈ ಎಲ್ಲ ಕಾರ್ಯಗಳಿಂದ ನಾಳ ಕ್ಷೇತ್ರವು ಅಭಿವೃದ್ಧಿ ಹೊಂದಿ, ಕ್ಷೇತ್ರದ ಸಾನ್ನಿಧ್ಯವು ವೃದ್ಧಿಯಾಗಿ ಹೆಚ್ಚಿನ ಭಕ್ತವೃಂದವನ್ನು ತನ್ನತ್ತ ಸೆಳೆಯುತ್ತಿದೆ. ಜ. 26ರಂದು ಸಂಜೆ 7 ಗಂಟೆಗೆ ಚಂದ್ರಮಂಡಲ ಉತ್ಸವ, 27ರಂದು ಬೆಳಗ್ಗೆ 9 ಗಂಟೆಗೆ ದೇವರ ದರ್ಶನ ಬಲಿ, ರಾತ್ರಿ 8 ಗಂಟೆಗೆ ದೇವರ ಉತ್ಸವ ಬಲಿ ಹೊರಟು, ಕೊಡಮಣಿತ್ತಾಯ ದೈವದ ಗಗ್ಗರ ಸೇವೆ ಮತ್ತು ರಾತ್ರಿ 11 ಗಂಟೆಗೆ ಮಹಾರಥೋತ್ಸವ ನೆರವೇರಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಜಾತ್ರಾ ಮಹೋತ್ಸವಕ್ಕೆ ಮೆರುಗು ನೀಡಲಿದ್ದು, ದಿನಾಂಕ 25ರಂದು ಗುರುವಾರ ರಾತ್ರಿ 8 ಗಂಟೆಗೆ ಮೋಕೆದ ಕಲಾವಿದೆರ್ ಅಭಿನಯಿಸುವ ಸುಟ್ಟು ಸೆಟ್ಯಾರು ವಿರಚಿತ ತುಳು ಹಾಸ್ಯಮಯ ನಾಟಕ “ಕಾಸ್ದ ಕಸರತ್ತ್” ದಿನಾಂಕ 26ರಂದು ರಾತ್ರಿ 9 ಗಂಟೆಗೆ ಉಮೇಶ್ ಮಿಜಾರ್ ಸಾರಥ್ಯದ ನವ ಕಲಾವಿದೆರ್ ಬೆದ್ರ ಅಭಿನಯದ ತುಳು ನಾಟಕ “ಆಕೆ ಪನೊಡಾತೆ” ದಿನಾಂಕ 27ರಂದು ರಾತ್ರಿ 7 ಗಂಟೆಗೆ ಡಾ. ನಯನ ಎ. ಭಟ್ ಗಂಗಾ ನಿಲಯ ಗೇರುಕಟ್ಟೆ ಮತ್ತು ತಂಡದವರಿಂದ ‘ನೃತ್ಯ ವೈಭವ’ ಮತ್ತು ರಾತ್ರಿ 7.30ಕ್ಕೆ ಕಲರ್ಸ್ ಕನ್ನಡ ವಾಹಿನಿಯ ಎದೆತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ಮತ್ತು ತಂಡದವರಿಂದ “ಸಂಗೀತ ಸಂಭ್ರಮ” ದಿನಾಂಕ 28ರಂದು ರಾತ್ರಿ 8 ಗಂಟೆಗೆ ಮಹಾವಿಷ್ಣು ಕಲಾ ತಂಡ ಕಣಿಯೂರು ಇವರಿಂದ ರವಿಶಂಕರ್ ಶಾಸ್ತ್ರೀ ಮಾಣಿಲ ವಿರಚಿತ ತುಳು ನಾಟಕ “ಬುಡ್ದು ಪಾಡೋಡ್ಚಿ” ದಿನಾಂಕ 29ರಂದು ರಾತ್ರಿ 8.30ಕ್ಕೆ ಗಂಟೆಗೆ ಊರ ಹವ್ಯಾಸಿ ಕಲಾವಿದರಿಂದ ರವಿಚಂದ್ರ ಬಿ. ಸಾಲ್ಯಾನ್ ವಿರಚಿತ ತುಳು ಸಾಮಾಜಿಕ ನಾಟಕ “ಅಣ್ಣಡ ತಾಂಟೊರ್ಚಿ” ದಿನಾಂಕ 30ರಂದು ರಾತ್ರಿ 7ಕ್ಕೆ “ಪಾಪಣ್ಣ ವಿಜಯ ಗುಣ ಸುಂದರಿ” ಎಂಬ ಪ್ರಸಂಗವನ್ನು ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮತ್ತು ಊರ ಹವ್ಯಾಸಿ ಕಲಾವಿದರು ಆಡಿ ತೋರಿಸಲಿದ್ದಾರೆ. ಹೀಗೆ ದಿನಂಪ್ರತಿ ಎಲ್ಲಾ ಕಾರ್ಯಕ್ರಮಗಳು ನೆರವೇರಲಿದೆ.

First Previous

Showing 3 of 3 pages

Next Last