ಕೀರ್ತಿಶೇಷ ಪ್ರೊ. ಎನ್. ಜಿ. ಪಟವರ್ಧನ್ ಬಗ್ಗೆ ವಿಚಾರ ಸಂಕಿರಣ
Published Date: 30-Jul-2024 Link-Copied
ಕೀರ್ತಿಶೇಷ ಪ್ರೊ. ಎನ್.ಜಿ. ಪಟವರ್ಧನ್ ಸ್ಮಾರಕ ದತ್ತಿನಿಧಿಯೊಂದನ್ನು ಎಸ್.ಡಿ.ಎಂ. ಕಾಲೇಜಿನಲ್ಲಿ ಸ್ಥಾಪಿಸಿ ಪ್ರತಿವರ್ಷ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಭಾಗಿತ್ವದಲ್ಲಿ ವರ್ಷಕ್ಕೊಂದು ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆಯುರ್ವೇದ ಪ್ರಾಧ್ಯಾಪಕರಾದ ಹಾಗೂ ಪ್ರೊ. ಎನ್. ಜಿ. ಪಟವರ್ಧನರ ಪುತ್ರ ಡಾ. ಕಿಶೋರ್ ಪಟವರ್ಧನ್ ಹೇಳಿದರು. ಅವರು ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಾಲೇಜಿನ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಎನ್.ಜಿ. ಪಟವರ್ಧನ್ ಅವರ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಬದುಕಿನ ಎಲ್ಲಾ ಸವಾಲುಗಳನ್ನು, ಸಮಸ್ಯೆಗಳನ್ನು ಧನಾತ್ಮಕವಾಗಿ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಸ್ವೀಕರಿಸಿದ ದಿವಂಗತ ಎನ್. ಜಿ. ಪಟವರ್ಧನ್ ಭಾವಪ್ರಧಾನವಾದ ಚುಟುಕುಗಳು, ಹನಿಗವನಗಳು, ಲಲಿತಪ್ರಬಂಧ ಮತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಸದಾ ಹಸನ್ಮುಖಿಯಾಗಿ ಭಾವಜೀವಿಯಾಗಿದ್ದ ಅವರ ಎಲ್ಲಾ ಕೃತಿಗಳು ಸರಳವಾಗಿದ್ದು ಸುಲಭ ಗ್ರಾಹ್ಯವಾಗಿವೆ ಎಂದರು. ವಿಚಾರ ಸಂಕಿರಣ ಉದ್ಘಾಟಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಮಾತನಾಡಿ, ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಪ್ರೊ. ಪಟವರ್ಧನ್ ಅಜಾತ ಶತ್ರುವಾಗಿದ್ದು, ಸಹೃದಯ ಸಾಹಿತಿ, ಉತ್ತಮ ಗಾಯಕರಾಗಿ, ಕಾಲೇಜಿನಲ್ಲಿ ಕನ್ನಡ ವಿಭಾಗವನ್ನು ಕಟ್ಟಿ ಬೆಳೆಸುವಲ್ಲಿ ಉತ್ತಮ ಸೇವೆ ನೀಡಿದ್ದರು. ಬಹುಮುಖ ಪ್ರತಿಭೆಯನ್ನು ಹೊಂದಿದ್ದ ಅವರು ಕ್ರೀಡಾಪಟುವಾಗಿಯೂ, ಉತ್ತಮ ಕೃಷಿಕರಾಗಿಯೂ ಚಿರಪರಿಚಿತರಾಗಿದ್ದರು ಎಂದು ಅವರ ಸೇವೆ, ಸಾಧನೆಯನ್ನು ಸ್ಮರಿಸಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುಮಾರ ಹೆಗ್ಡೆ ಮಾತನಾಡಿ, ಸೃಜನಶೀಲ ಸಾಹಿತಿಯಾಗಿದ್ದ ಪ್ರೊ. ಎನ್. ಜಿ. ಪಟವರ್ಧನ್ ಆದರ್ಶ ಅಧ್ಯಾಪಕರಾಗಿ, ಸಂತೃಪ್ತ, ಸಾರ್ಥಕ ಜೀವನ ನಡೆಸಿದ್ದಾರೆ. ಅನಾರೋಗ್ಯದ ಸಂದರ್ಭ ಉತ್ತಮ ಶುಶ್ರೂಷೆ ನೀಡಿ ಅವರ ಸೇವೆ ಮಾಡಿದ ಪತ್ನಿ ಮತ್ತು ಮಕ್ಕಳನ್ನು ಅಭಿನಂದಿಸಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮೀ ಪಟವರ್ಧನ್ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ರಾಜೇಶ್ವರಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಬೋಜಮ್ಮ ಸ್ವಾಗತಿಸಿದರು. ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಯದುಪತಿ ಗೌಡ ಧನ್ಯವಾದವಿತ್ತರು. ನಿವೃತ್ತ ಪ್ರಾಂಶುಪಾಲ ಪ್ರೊ. ಟಿ. ಕೃಷ್ಣಮೂರ್ತಿ ಪ್ರೊ. ಎನ್. ಜಿ. ಪಟವರ್ಧನರ ವೃತ್ತಿ ಮತ್ತು ವ್ಯಕ್ತಿತ್ವದ ಬಗ್ಗೆ ಹಾಗೂ ಕನ್ನಡ ಉಪನ್ಯಾಕ ಪ್ರೊ. ದಿವಾಕರ ಅವರು ಪಟವರ್ಧನರ ಸಾಹಿತ್ಯ, ಸಾಧನೆ ಬಗ್ಗೆ ಉಪನ್ಯಾಸ ನೀಡಿದರು.