ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ ಸಂಭ್ರಮಾಚರಣೆ
Published Date: 26-Jul-2024 Link-Copied
ಬೆಳ್ತಂಗಡಿ: ಈ ನಾಡಿನ ತರುಣ- ತರುಣಿಯರು ಆತ್ಮವಿಶ್ವಾಸಿ ಛಲಗಾರರಾಗಬೇಕು. ನಮ್ಮ ನಾಳೆಗಳಿಗಾಗಿ ಅಂದು ತಮ್ಮ ಬದುಕು ಮೀಸಲಿಟ್ಟ ಯೋಧರ ತ್ಯಾಗ, ಪರಿಶ್ರಮ, ಬಲಿದಾನಗಳು ಅವಿಸ್ಮರಣೀಯ ಎಂದು ನಿವೃತ್ತ ಮೇಜರ್ ಜನರಲ್ ಮತ್ತು ಬೆಳ್ತಂಗಡಿ ನಿವೃತ್ತ ಯೋಧರ ಸಂಘದ ಗೌರವ ಅಧ್ಯಕ್ಷ ಎಮ್. ವೆಂಕಟೇಶ್ವರ ಭಟ್ ಹೇಳಿದರು. ಇವರು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಬೆಳ್ತಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿದ 25 ನೇ ಕಾರ್ಗಿಲ್ ವಿಜಯ ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಯಶಸ್ಸಿನ ಮಾರ್ಗದೆಡೆಗೆ ಸಾಗಲು ಶಿಸ್ತು ಮತ್ತು ಸಮಯಪಾಲನೆ ಅತಿ ಮುಖ್ಯ. ಬಿರುಸಿನ ಚಳಿಗಾಳಿಯ ನಡುವೆಯು ದೇಶದ ರಕ್ಷಣೆಗಾಗಿ ಗಡಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಬದುಕು ನಮಗೆ ಮಾರ್ಗದರ್ಶನವಾಗಬೇಕು. ಇಂತಹ ಸೇವೆಗಳನ್ನು ಸಮಾಜ ಸದಾ ಗೌರವಿಸಬೇಕು ಮತ್ತು ಅವರ ಒಳಿತಿಗಾಗಿ ಪ್ರಾರ್ಥಿಸಬೇಕು ಎಂದು ಅಭಿಪ್ರಾಯಪಟ್ಟರು. ಮುಂದುವರಿದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರತಿವರ್ಷದ ಬೆಳವಣಿಗೆಯನ್ನು ಶ್ಲಾಘಿಸಿ, ಮಹಿಳೆಯರಿಗೂ ರಕ್ಷಣಾ ವಿಭಾಗದಲ್ಲಿ ವಿಪುಲ್ಲವಾದ ಅವಕಾಶಗಳಿವೆ. ರಕ್ಷಣಾವಲಯದಲ್ಲಿನ ಭೂಪಡೆ, ವಾಯುಪಡೆ ಮತ್ತು ನೌಕಾಪಡೆಯಲ್ಲಿನ ಮಹಿಳಾ ಮೀಸಲಾತಿಯನ್ನು ಹೆಣ್ಣುಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಳಿಕ ವಿದ್ಯಾರ್ಥಿಗಳು ಕೇಳಿದ ನಾನಾ ಪ್ರಶ್ನೆಗಳಿಗೆ ಉತ್ತರಿಸಿ, ಸೇನಾ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ತರಬೇತಿ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ ಅರವಿಂದ ಮಾತನಾಡಿ ಈ ದೇಶ ಬೆಳೆದು ಬಂದ ಇತಿಹಾಸದ ಪುಟಗಳನ್ನು ನಾವು ಗಮನಿಸಬೇಕು. ಇವತ್ತಿನ ಸಂಭ್ರಮಾಚರಣೆಯಲ್ಲಿ ನೂರಾರು ಯೋಧರ ತ್ಯಾಗದ ಸಮರ್ಪಣೆಯಿದೆ ಎಂದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಮತ್ತು ಬೆಳ್ತಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಣಿತಶಾಸ್ತ್ರ ಉಪನ್ಯಾಸಕ ಮೋಹನ್ ಭಟ್ ಸ್ವಾಗತಿಸಿ, ರಾಸಾಯನ ಶಾಸ್ತ್ರ ಉಪನ್ಯಾಸಕಿ ಹೇಮಾ ಕೆ. ಕಾರ್ಯಕ್ರಮವನ್ನು ವಂದಿಸಿದರು.