ಮೂಡುಬಿದಿರೆ: ಎಕ್ಸಲೆಂಟ್ ಕಾಲೇಜಿನ ಓರಿಯಂಟೇಶನ್ ಕಾರ್ಯಕ್ರಮ
Published Date: 10-Jul-2024 Link-Copied
ಮೂಡುಬಿದಿರೆ: ಭಾರತೀಯ ಪರಂಪರೆಯಲ್ಲಿ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿಯಿದ್ದು, ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಹೆತ್ತವರಿಂದ ದೂರವಿದ್ದು ಹಲವು ವರ್ಷಗಳ ಕಾಲ ಗುರುಗಳ ಬಳಿ ವಿದ್ಯಾಭ್ಯಾಸ ಪೂರೈಸಿ ತದನಂತರ ಮನೆಗೆ ಮರಳುವುದು ವಾಡಿಕೆ. ಇಂದಿನ ಆಧುನಿಕ ಯುಗದಲ್ಲೂ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿಯನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆ ಅನುಸರಿಸುತ್ತಾ ಬಂದಿದೆ. ಒಂದು ಶಿಲೆಯನ್ನು ಸುಂದರ ಮೂರ್ತಿಯಾಗಿ ಕೆತ್ತುವಲ್ಲಿ ಶಿಲ್ಪಿಯು ಹೇಗೆ ಶಿಲೆಯನ್ನು ಕೆತ್ತಬೇಕಾಗುವುದೋ, ಅದೇ ರೀತಿ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗಾಗಿ ತಪ್ಪಿ ನಡೆದ ವಿದ್ಯಾರ್ಥಿಯನ್ನು ತಿದ್ದಿ ತೀಡುವುದು ಗುರುವಿನ ಕರ್ತವ್ಯ. ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿ ಹೋದ ಅದೆಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಶಿಕ್ಷಣವನ್ನು ಪೂರೈಸಿ ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ. ಅವರ ಉನ್ನತ ಜೀವನ ನಮ್ಮ ಪ್ರಯತ್ನಕ್ಕೆ ಸಾರ್ಥಕತೆಯನ್ನು ಒದಗಿಸಿಕೊಡುತ್ತದೆ ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಹೇಳಿದರು. ಅವರು ಎಕ್ಸಲೆಂಟ್ ನ ಪ್ರಥಮ ಪದವಿಪೂರ್ವ ವಿದ್ಯಾರ್ಥಿಗಳು ಮತ್ತು ಹೆತ್ತವರಿಗಾಗಿ 2024-25ನೇ ಶೈಕ್ಷಣಿಕ ಸಾಲಿನ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಿದ್ದರು. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹೆತ್ತವರು ತ್ಯಾಗ ಮಾಡಿ ನಿಮ್ಮನ್ನು ವಸತಿ ವ್ಯವಸ್ಥೆ ಇರುವ ಶಿಕ್ಷಣ ಸಂಸ್ಥೆಗೆ ಸೇರಿಸಿದ್ದಾರೆ. ಇದು ನಿಮ್ಮನ್ನು ನೋಯಿಸಲೆಂದಲ್ಲ. ಬದಲಾಗಿ ನಿಮ್ಮ ಜೀವನ ಹಸನಾಗಲೆಂದು. ಹಾಗಾಗಿ ನಿಮ್ಮ ಹೆತ್ತವರ ಮನದಿಂಗಿತವನ್ನು ಅರಿತು ಸಾಧನೆಯನ್ನು ಮಾಡುವಂತಾಗಬೇಕು. ಕೇವಲ ಅಂಕಗಳಿಕೆಗೆ ಮಾತ್ರ ಈ ಸಂಸ್ಥೆ ಹೆಸರುವಾಸಿಯಾಗಿಲ್ಲ. ಶಿಕ್ಷಣದ ಜೊತೆ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನೂ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದರು. ಹತ್ತನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯನ್ನು ಸೇರಿ ಪದವಿಪೂರ್ವ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಸ್ಥಾನವನ್ನು ಪಡೆದ ಅನೇಕ ನಿದರ್ಶನಗಳಿವೆ. ಅಸಾಧ್ಯವೆನ್ನುವುದು ಇಲ್ಲವೇ ಇಲ್ಲ. ನಿರಂತರ ಪರಿಶ್ರಮ, ಛಲ ಅಸಾಧ್ಯವನ್ನು ಸಾಧ್ಯವಾಗಿಸುತ್ತದೆ. ಎಲ್ಲಾ ಹಂತದ ವಿದ್ಯಾರ್ಥಿಗಳಿಗೂ ಇಲ್ಲಿ ಮುಕ್ತ ಅವಕಾಶವಿದೆ ಎಂದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡುತ್ತಾ, ನಿಮ್ಮ ಮಕ್ಕಳನ್ನು ಈ ಸಂಸ್ಥೆಗೆ ಸೇರಿಸುವ ಮುನ್ನ ಅನೇಕ ಬಾರಿ ವಿಚಾರಿಸಿ, ಮಿಮರ್ಶಿಸಿ ನಿರ್ಧಾರ ತೆಗೆದುಕೊ0ಡಿರುತ್ತೀರಿ. ಒಮ್ಮೆ ತೆಗೆದುಕೊಂಡ ನಿರ್ಧಾರದ ಬಗ್ಗೆ ಯಾವುದೇ ಗೊಂದಲ ಬೇಡ. ಸಾವಿರಾರು ವಿದ್ಯಾರ್ಥಿಗಳ 24 ಗಂಟೆಗಳ ಯೋಗಕ್ಷೇಮ ನೊಡಿಕೊಳ್ಳುವುದು ಸಂಸ್ಥೆಯ ಗುರುತರವಾದ ಜವಾಬ್ದಾರಿಯಾಗಿದೆ. ವಿದ್ಯಾಭ್ಯಾಸದ ಪ್ರಕ್ರಿಯೆಯಲ್ಲಿ ಅನೇಕ ಸವಾಲುಗಳು ಬರುತ್ತವೆ. ಆ ಸವಾಲುಗಳನ್ನು ಲೆಕ್ಕಿಸದೆ ಮುನ್ನಡೆಯಬೇಕು. ಪದವಿಪೂರ್ವ ವಿದ್ಯಾಭ್ಯಾಸ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಉತ್ತಮ ಸಮಯ. ಈ ಸಮಯವನ್ನು ಹಾಳು ಮಾಡದೆ ಅದರ ಸದುಪಯೋಗ ಪಡಿಸಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು. ರಾಷ್ಟ್ರ ಮಟ್ಟದ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನಡೆಸಲಾದ ನೀಟ್ ಪರೀಕ್ಷೆಯಲ್ಲಿ 710 ಅಂಕ ಹಾಗೂ ಸಿಇಟಿಯಲ್ಲಿ 8ನೇ ಸ್ಥಾನ ಪಡೆದ ವಿದ್ಯಾರ್ಥಿ ನಿಖಿಲ್ ಗೌಡ ತನ್ನ ಅನುಭವವನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು. ನಿಖಿಲ್ ಗೌಡನನ್ನು ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಲಾಯಿತು. ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಕ್ರಮ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.