ತಾಳಮದ್ದಳೆ ಸಪ್ತಾಹ ಸಮಾರೋಪ-ಪದ್ಯಾಣ, ಕುರಿಯ ಪ್ರಶಸ್ತಿ ಪ್ರದಾನ
Published Date: 08-Jul-2024 Link-Copied
“ಯಕ್ಷಗಾನ ಬಯಲಾಟಗಳು ಮನಸ್ಸಿಗೆ ಮೋದವನ್ನು ನೀಡಿದರೆ, ತಾಳಮದ್ದಳೆಯು ಬುದ್ದಿಗೆ ಗ್ರಾಸವನ್ನು ಒದಗಿಸುತ್ತದೆ. ಭಾಷಾಶುದ್ಧತೆ, ಪುರಾಣ ಜ್ಞಾನ, ಅಂದವಾಗಿ ಮಾತನಾಡುವ ಶಕ್ತಿ, ಗ್ರಹಿಕಾ ಸಾಮರ್ಥ್ಯ ಮತ್ತು ಬದುಕಿಗೆ ಬೇಕಾದ ಸಂದೇಶಗಳನ್ನು ಯಕ್ಷಗಾನವು ಒದಗಿಸುತ್ತದೆ. ಅಕ್ಷರಾಭ್ಯಾಸ ಇಲ್ಲದವರೂ ಆಟ, ಕೂಟಗಳನ್ನು ನೋಡಿಯೇ ಪುರಾಣ ಜ್ಞಾನವನ್ನು ಪಡೆದವರಿದ್ದಾರೆ. ಅದು ಯಕ್ಷಗಾನದ ಶಕ್ತಿ” ಎಂದು ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು. ಅವರು ಪುತ್ತೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಸಭಾಭವನದಲ್ಲಿ ಜರುಗಿದ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡುತ್ತಾ, “ಎಡನೀರು ಮಠದಲ್ಲಿ ಚಾತುರ್ಮಾಸ ವ್ರತಾಚರಣೆ ಸಂದರ್ಭದಲ್ಲಿ ಹಿಂದಿನಿಂದಲೂ ತಾಳಮದ್ದಳೆಯು ಆರಾಧನೆಯ ರೂಪದಲ್ಲಿ ನಡೆಯುತ್ತದೆ.” ಎಂದರು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇವರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಪದ್ಯಾಣ ಮನೆತನದ ಹಿರಿಯ ಪುಟ್ಟು ನಾರಾಯಣ ಭಾಗವತರ ಸ್ಮೃತಿಯಲ್ಲಿ ನೀಡುವ ‘ಪದ್ಯಾಣ ಪ್ರಶಸ್ತಿ’ಯನ್ನು ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಹಾಗೂ ಕುರಿಯ ವಿಠಲ ಶಾಸ್ತ್ರಿ ನೆನಪಿನ ‘ಕುರಿಯ ಪ್ರಶಸ್ತಿ’ಯನ್ನು ಹಿರಿಯ ಹಿಮ್ಮೇಳ ವಾದಕರಾದ ಧರ್ಮಸ್ಥಳದ ಬಿ. ಸೀತಾರಾಮ ತೋಳ್ಪಾಡಿತ್ತಾಯರಿಗೆ ಶ್ರೀಗಳು ಪ್ರದಾನಿಸಿದರು. ಕುರಿಯ ಸ್ಮೃತಿ ಗೌರವವನ್ನು ಯಕ್ಷಗಾನ ಅರ್ಥದಾರಿಗಳಾದ ಕೆ. ಭಾಸ್ಕರ ರಾವ್ ಹಾಗೂ ಭಾಸ್ಕರ ನೂರಿತ್ತಾಯ ಬಾರ್ಯ ಇವರಿಗೆ ನೀಡಲಾಯಿತು. ಪುತ್ತೂರು ಮುಳಿಯ ಜ್ಯುವೆಲ್ಲರ್ಸ್ ಇದರ ಆಡಳಿತ ನಿರ್ದೇಶಕ ಮುಳಿಯ ಕೇಶವ ಪ್ರಸಾದ್, ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿಯವರು ಪ್ರಶಸ್ತಿ ಪುರಸ್ಕೃತರನ್ನು ನುಡಿಹಾರಗಳ ಮೂಲಕ ಗೌರವಿಸಿದರು. ಶೀಲಾ ಗಣಪತಿ ಭಟ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಮಾತನಾಡುತ್ತಾ, “ಕೀರ್ತಿಶೇಷ ಭಾಗವತ ಪದ್ಯಾಣ ಗಣಪತಿ ಭಟ್ಟರು ಕಾಲಮಿತಿ ಪ್ರದರ್ಶನವನ್ನು ಯಶಸ್ವಿಯಾಗಿ ನಿಭಾಯಿಸಿದವರು. ಪದ್ಯಾಣ ಮತ್ತು ಕುರಿಯ ಮನೆತನಗಳ ಯಕ್ಷಗಾನೀಯ ಕೊಡುಗೆಗಳಲ್ಲಿ ಸಮರ್ಪಣಾ ಭಾವವಿರುವುದನ್ನು ಕಾಣಬಹುದು.” ಎಂದರು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು ಸಂಮಾನಿತರನ್ನು ನುಡಿಹಾರಗಳ ಮೂಲಕ ಅಲಂಕರಿಸಿದರು. ತಾಳಮದ್ದಳೆ ಸಪ್ತಾಹದುದ್ದಕ್ಕೂ ಭಾಗವತ ಪದ್ಯಾಣ ಗಣಪತಿ ಭಟ್ಟರ ಸ್ಮೃತಿಯನ್ನು ಮಾಡಲಾಗಿತ್ತು. ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯು ಸಪ್ತಾಹದ ಸಂಘಟನೆಯಲ್ಲಿ ದೊಡ್ಡ ಹೆಗಲು ನೀಡಿತ್ತು. ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಪದ್ಯಾಣ ಪ್ರಶಸ್ತಿ ಸಮಿತಿಯ ಸ್ವಸ್ತಿಕ್ ಪದ್ಯಾಣ ವಂದಿಸಿದರು. ಕೊನೆಯಲ್ಲಿ ‘ಗಂಗಾ ಸಾರಥ್ಯ’ ಪ್ರಸಂಗದ ತಾಳಮದ್ದಳೆ ನಡೆಯಿತು.