ಧರ್ಮಸ್ಥಳದಲ್ಲಿ ವಿದುಷಿ ಚೈತ್ರ ಭಟ್ ಅವರ ಭರತನಾಟ್ಯ ರಂಗಪ್ರವೇಶ
Published Date: 25-Jun-2024 Link-Copied
ಭಾರತದ ಅಪೂರ್ವ ಕಲೆಗಳು ಹಾಗೂ ಅಧಿಕ ಮಾನವಸಂಪನ್ಮೂಲ ದೇಶದ ಅಮೂಲ್ಯ ಸಂಪತ್ತು ಹಾಗೂ ವರದಾನವಾಗಿದೆ ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ವಿದುಷಿ ಚೈತ್ರ ಭಟ್ ಅವರ ಭರತನಾಟ್ಯ ರಂಗಪ್ರವೇಶ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು. ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು, ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಕಲೆಗಳನ್ನೂ ಹವ್ಯಾಸವಾಗಿ ಕರಗತ ಮಾಡಿಕೊಳ್ಳಬೇಕು. ಎಂಟು ವಿಧದ ಶಾಸ್ತ್ರೀಯ ನೃತ್ಯಗಳಲ್ಲಿ ತಮಿಳುನಾಡು ಮೂಲದ ಭರತನಾಟ್ಯ ಸರ್ವಶ್ರೇಷ್ಠ ಕಲೆಯಾಗಿದೆ. ಹಿಂದೆ ಕೇವಲ ಬೆರಳೆಣಿಕೆಯಷ್ಟು ನೃತ್ಯ ಶಿಕ್ಷಕರಿದ್ದರು ಇಂದು ಕರ್ನಾಟಕದಲ್ಲಿ ಮೂರು ಸಾವಿರಕ್ಕೂ ಮಿಕ್ಕಿ ನೃತ್ಯ ಶಿಕ್ಷಕರಿದ್ದಾರೆ ಹಾಗೂ ನೃತ್ಯ ಅಭ್ಯಾಸ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಚೈತ್ರ ಭಟ್ ಅವರು ಭರತನಾಟ್ಯದಲ್ಲಿ ಮಾಡಿದ ಭಗೀರಥ ಪ್ರಯತ್ನ, ಸಾಧನೆ ಮತ್ತು ಪ್ರಭುತ್ವಕ್ಕೆ ಅವರು ಅಭಿನಂದಿಸಿ ಆಕೆಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು. ರಶ್ಮಿಚಿದಾನಂದ, ಗೀತಾ ಸರಳಾಯ ಮತ್ತು ರಾಜಶ್ರೀ ಉಳ್ಳಾಲ ಉಪಸ್ಥಿತರಿದ್ದರು. ರಾಜಶ್ರೀ ಉಳ್ಳಾಲ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸುಮಧುರ ಸಂಗೀತ, ಶೃಂಗಾರ, ರಾಗ, ತಾಳ, ಲಯಬದ್ಧ ಹಾಡುಗಳ ಲಾಲಿತ್ಯ, ನಾಟ್ಯ, ಹಾವ-ಭಾವದೊಂದಿಗೆ ನೃತ್ಯ ಮತ್ತು ನರ್ತಕಿ ಒಂದಾದಾಗ ನೃತ್ಯವು ಜೀವಾತ್ಮ ಮತ್ತು ಪರಮಾತ್ಮನ ಐಕ್ಯತೆಯ ಸಂಕೇತವಾಗಿ ಪ್ರತಿಬಿಂಬಿತವಾಗುತ್ತದೆ. ಭಾವಪ್ರಧಾನವಾದ ನಾಟ್ಯಕ್ಕೆ ಭಾಷೆಯ ಹಂಗಿಲ್ಲ ಎಂದು ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು. ಚೈತ್ರ ಭಟ್ ಅವರ ಸಾಧನೆ ಮತ್ತು ಪ್ರತಿಭೆಯನ್ನು ಗೌರವಿಸಿ, ಅಭಿನಂದಿಸಿದರು. ನೃತ್ಯದಲ್ಲಿ ಭಾವನೆಗಳ ಅಭಿವ್ಯಕ್ತಿಯೇ ಮುಖ್ಯವಾಗಿದ್ದು ನೃತ್ಯ ಮಾಡುವವರ ಮನಸ್ಸು ಸದಾ ಜಾಗೃತವಾಗಿರಬೇಕು. ಮೈಯೆಲ್ಲಾ ಕಣ್ಣಾಗಿರಬೇಕು. ನೃತ್ಯ ಕಲಿತರೆ ದೇಹದ ಎಲ್ಲಾ ಅಂಗಗಳಿಗೂ ವ್ಯಾಯಾಮ ದೊರಕಿ ದೈಹಿಕ ಮತ್ತು ಮಾನಸಿಕ ದೃಢತೆ ಹೆಚ್ಚಾಗುತ್ತದೆ. ಆರೋಗ್ಯ ಭಾಗ್ಯವೂ ಸಿಗುತ್ತದೆ ಎಂದು ಅವರು ಹೇಳಿದರು. ಚೈತ್ರ ಭಟ್ ತನಗೆ ಭರತನಾಟ್ಯ ಕಲಿಸಿದ ಗುರುಗಳಾದ ಗೀತಾ ಸರಳಾಯ ಮತ್ತು ರಶ್ಮಿ ಚಿದಾನಂದ ಅವರನ್ನು ಗೌರವಿಸಿ ಕೃತಜ್ಞತೆ ವ್ಯಕ್ತಪಡಿಸಿದರು. ಕುಮಾರಿ ಚೈತ್ರ ಭಟ್ ಮಾತನಾಡಿ ತನ್ನ ಸಾಧನೆಗೆ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರ ಪ್ರೋತ್ಸಾಹ, ತನ್ನ ತಾಯಿ, ಅಕ್ಕ ಮತ್ತು ಬಾವನ ಬೆಂಬಲವನ್ನು ಧನ್ಯತೆಯಿಂದ ಸ್ಮರಿಸಿದರು. ಅಧ್ಯಕ್ಷತೆ ವಹಿಸಿದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಧರ್ಮಸ್ಥಳದಲ್ಲಿ ಪ್ರಥಮವಾಗಿ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ನಡೆದಿದ್ದು ಚೈತ್ರ ಭಟ್ ಅವರು ಭರತನಾಟ್ಯದಲ್ಲಿ ಸ್ವಪ್ರಯತ್ನದಿಂದ ಮಾಡಿದ ಸಾಧನೆ ಮತ್ತು ಪ್ರಭುತ್ವವನ್ನು ಶ್ಲಾಘಿಸಿ ಅಭಿನಂದಿಸಿ ಉಜ್ವಲ ಭವಿಷ್ಯವನ್ನು ಹಾರೈಸಿದರು. ಆಕೆಯ ನೃತ್ಯ ಪ್ರದರ್ಶನ ನೋಡಿ ಎಲ್ಲರೂ ಸಂತೋಷ ಪಟ್ಟಿದ್ದಾರೆ. ಇನ್ನು ಮುಂದೆ ಇಂತಹ ಕಾರ್ಯಕ್ರಮಗಳಿಗೂ ಧರ್ಮಸ್ಥಳದಲ್ಲಿ ಅವಕಾಶ ನೀಡಲಾಗುವುದು. ಯುವ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು. ಚೈತ್ರ ಭಟ್ ಅವರನ್ನು ಗೌರವಿಸಲಾಯಿತು. ಸುಧಾಕರರಾವ್, ಪೇಜಾವರ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಮಂಜುಳಾ ಕೊನೆಯಲ್ಲಿ ಧನ್ಯವಾದವಿತ್ತರು.