ಧರ್ಮಸ್ಥಳ: “ಮಂಜೂಷಾ” ವಸ್ತು ಸಂಗ್ರಹಾಲಯಕ್ಕೆ ಸೇರ್ಪಡೆಗೊಂಡ “ಜೈಬಾಲಾಜಿ” ಹಾಯಿದೋಣಿ
Published Date: 10-Jun-2024 Link-Copied
ಕುಂದಾಪುರದಲ್ಲಿ ಪಂಚಗಂಗಾವಳಿ ನದಿಯಲ್ಲಿ ಕಳೆದ 14 ವರ್ಷಗಳಿಂದ ಚಿಪ್ಪುಗಳನ್ನು ಸಾಗಿಸುತ್ತಿದ್ದ “ಜೈಬಾಲಾಜಿ” ಹಾಯಿದೋಣಿಯನ್ನು ಸೋಮವಾರ ಧರ್ಮಸ್ಥಳದಲ್ಲಿ “ಮಂಜೂಷಾ” ವಸ್ತು ಸಂಗ್ರಹಾಲಯಕ್ಕೆ ಅರ್ಪಿಸಲಾಯಿತು. ಕುಂದಾಪುರದ ಖಾರ್ವಿಕೇರಿಯ ಜೈಬಾಲಾಜಿ ಎಂಟರ್‌ಪ್ರೈಸಸ್ ಮಾಲಕ ವೆಂಕಟೇಶ್ ಖಾರ್ವಿ ತಮ್ಮ ಹಾಯಿದೋಣಿಯನ್ನು “ಮಂಜೂಷಾ” ವಸ್ತು ಸಂಗ್ರಹಾಲಯಕ್ಕೆ ಸಮರ್ಪಿಸಿದರು. ಸವಿವರ ಮಾಹಿತಿ: 51 ಅಡಿ ಉದ್ದ ಹಾಗೂ 10 1/2 ಅಡಿ ಅಗಲದ ಬೃಹತ್ ಹಾಯಿದೋಣಿ ಒಂದೇ ಮರದ ಹಲಗೆಯಿಂದ ನಿರ್ಮಿತವಾಗಿದೆ. ಇದಕ್ಕೆ 22 ಅಡಿ ಎತ್ತರದ ಕಾಟಿಮರ ಮತ್ತು ಹಾಯಿ ಇದೆ. 20 ವರ್ಷಗಳ ಹಿಂದೆ ಇಂತಹ ಹತ್ತು ದೊಣಿಗಳಿದ್ದವು. ಚಿಪ್ಪು, ಮರ, ಹಂಚು ಸಾಗಾಟಕ್ಕೂ ಅವುಗಳು ಬಳಕೆಯಾಗುತ್ತಿದ್ದವು. ಚಿಪ್ಪು ಸದ್ಯ ನಶಿಸುತ್ತಾ ಬಂದಿರುವುದರಿಂದ ಮುಂದಿನ ಪೀಳಿಗೆಗೆ ಕೊಂಕಣಿ ಖಾರ್ವಿಸಮಾಜದ ಜನಜೀವನ ಹಾಗೂ ಹಾಯಿದೋಣಿ ಬಗ್ಗೆ ಪರಿಚಯ ಮಾಡಿಕೊಳ್ಳಲು ಹಾಯಿ ದೋಣಿ ಮಾರ್ಗದರ್ಶಿಯಾಗಲಿ ಎಂಬ ಉದ್ದೇಶದಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅನುಮತಿ ಮತ್ತು ಆಶೀರ್ವಾದಗಳೊಂದಿಗೆ ಇದನ್ನು “ಮಂಜೂಷಾ”ಕ್ಕೆ ಸಮರ್ಪಿಸಲಾಗಿದೆ ಎಂದು ಮಾಲಕ ವೆಂಕಟೇಶ್ ಖಾರ್ವಿ ತಿಳಿಸಿದ್ದಾರೆ. ಕೊಂಕಣಿ ಖಾರ್ವಿ ಸಮಾಜದ ಸುಭಾಷ್ ಖಾರ್ವಿ, ಸುನಿಲ್ ಖಾರ್ವಿ ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.