HSRPಗೆ ಇನ್ನಷ್ಟು ಗಡುವು ವಿಸ್ತರಣೆ
Published Date: 17-Feb-2024 Link-Copied
ಬೆಂಗಳೂರು: ರಾಜ್ಯದಲ್ಲಿ ಹಳೆ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್-ಎಚ್ಎಸ್‌ಆರ್‌ಪಿ) ಅಳವಡಿಕೆಗೆ ನಿಗದಿಪಡಿಸಿದ್ದ ಗಡುವನ್ನು ಮೇ 31ರವರೆಗೆ ವಿಸ್ತರಿಸಿ ಸಾರಿಗೆ ಇಲಾಖೆ ಫೆ. 16ರಂದು ಆದೇಶ ಹೊರಡಿಸಿದೆ. ಈ ಹಿಂದೆ 2023ರ ಆ. 18ರಂದು ಅಧಿಸೂಚನೆ ಹೊರಡಿಸಿದ್ದ ಸಾರಿಗೆ ಇಲಾಖೆಯು ರಾಜ್ಯದಲ್ಲಿ 2019ರ ಏ. 1ಕ್ಕೂ ಮುನ್ನ ನೋಂದಣಿಯಾದ ಹಳೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ನ. 17ರವರೆಗೆ ಕಾಲಾವಕಾಶ ನೀಡಿತ್ತು. ರಾಜ್ಯದಲ್ಲಿ ಅಂತಹ ಸುಮಾರು 2 ಕೋಟಿ ವಾಹನಗಳಿದ್ದು, ನ. 17ರ ಗಡುವಿನೊಳಗೆ ಬಹುತೇಕ ಹಳೆ ವಾಹನಗಳ ಮಾಲೀಕರು ಎಚ್ಎಸ್‌ಆರ್‌ಪಿ ಅಳವಡಿಸಿಕೊಳ್ಳಬಹುದೆಂದು ಇಲಾಖೆ ನಿರೀಕ್ಷಿಸಿತ್ತು. ಆದರೆ, ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ಹೀಗಾಗಿ, ಸಾರಿಗೆ ಇಲಾಖೆಯು ಫೆ. 17ರವರೆಗೆ ಗಡುವು ವಿಸ್ತರಿಸಿತ್ತು. ಈ ಗಡುವು ಈಗಾಗಲೇ ಅಂತ್ಯಗೊಂಡಿದ್ದು, ಈವರೆಗೆ 2 ಕೋಟಿ ಹಳೆ ವಾಹನಗಳ ಪೈಕಿ 19 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆಯಾಗಿದೆ. ಮತ್ತೊಂದೆಡೆ ಎಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ಕೋರಿಕೆ ಸಲ್ಲಿಸುವ ವೆಬ್‌ಪೊಟ೯ಲ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಆನ್‌ಲೈನ್ ನೋಂದಣಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಈ ಕಾರಣಕ್ಕೆ ಮತ್ತೊಮ್ಮೆ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಗಡುವು ವಿಸ್ತರಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದರು. ಈ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಸಾರಿಗೆ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಗಡುವು ವಿಸ್ತರಿಸಿದೆ.