ವೇಣೂರು : ಸರ್ವಾಂಗ ಸುಂದರ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ದಿನಗಣನೆ
Published Date: 11-Feb-2024 Link-Copied
ಸುಮಾರು 420 ವರ್ಷಗಳ ಹಿಂದೆ ಏಕಶಿಯಲ್ಲಿ ಕೆತ್ತಲಾದ ನಾಡಿನ ಅಪೂರ್ವ ವಿಗ್ರಹಗಳ ಸಾಲಿನಲ್ಲಿ ಕಂಗೊಳಿಸುತ್ತಿರುವ ದ.ಕ. ಜಿಲ್ಲೆಯ ಪುರಾತನ "ಅಜಿಲ" ಅರಸು ಸಂಸ್ಥಾನ ವ್ಯಾಪ್ತಿಯಲ್ಲಿರುವ ವೇಣೂರಿನ 35 ಅಡಿ ಎತ್ತರದ ಭಗವಾನ್ ಬಾಹುಬಲಿ ಮೂರ್ತಿಗೆ ಈ ಶತಮಾನದ 3ನೇ ಮಹಾಮಸ್ತಕಾಭಿಷೇಕಕ್ಕೆ ದಿನಗಣನೆ ಆರಂಭಗೊಂಡಿದೆ. ಯುಗಲಮುನಿವರ್ಯರಾದ ೧೦೮ ಅಮೋಘಕೀರ್ತಿ ಮುನಿ ಮಹಾರಾಜರು ಮತ್ತು ೧೦೮ ಅಮರಕೀರ್ತಿ ಮುನಿ ಮಹಾರಾಜರ ಪಾವನ ಸಾನ್ನಿಧ್ಯದಲ್ಲಿ ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಡಾ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರ ಕಾರ್ಯಾಧ್ಯಕ್ಷತೆಯಲ್ಲಿ ನೆರವೇರಲಿದೆ. ದೇಶದ ಮೂಲೆಮೂಲೆಯಿಂದ ಮುನಿವರ್ಯರು, ಕರುನಾಡಿನ ಸಮಸ್ತ ಭಟ್ಟಾರಕ ಸ್ವಾಮೀಜಿಗಳವರು ಸೇರಿದಂತೆ ಶ್ರಾವಕ -ಶ್ರಾವಕಿಯರು ಈ ಪುಣ್ಯೋತ್ಸವದಲ್ಲಿ ಭಾಗಿಯಾಗಲಿದ್ದು, 9 ದಿನಗಳ (ಫೆ. 22ರಿಂದ ಮಾ. 1ರ ವರೆಗೆ) ಮಸ್ತಕಾಭಿಷೇಕದಲ್ಲಿ ಲಕ್ಷಾಂತರ ಭಕ್ತರ ಸೇರುವಿಕೆಯನ್ನು ನಿರೀಕ್ಷಿಸಲಾಗಿದೆ. 35 ಅಡಿ ಎತ್ತರವಿರುವ ಗೊಮ್ಮಟ ವಿಗ್ರಹದ 3 ಭಾಗಗಳಲ್ಲಿ ಸುಮಾರು 50 ಅಡಿ ಎತ್ತರದ ಸುಂದರ ಕಬ್ಬಿಣದ ಅಟ್ಟಳಿಗೆ ಗೋಪುರವನ್ನು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಟ್ಟಳಿಗೆ ಮೇಲೆ ಹತ್ತಿ ವೀಕ್ಷಿಸುವ ಅವಕಾಶವನ್ನು ಸಾರ್ವಜನಿಕರಿಗೆ ನೀಡಲಾಗಿದ್ದು, ಅಟ್ಟಳಿಗೆ ಅಲಂಕಾರ ಕಾರ್ಯ ಆರಂಭವಾಗಬೇಕಿದೆ. 1 ಕೋಟಿ ಕಾಮಗಾರಿ: ರಾಜ್ಯ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1 ಕೋಟಿ ರೂ. ಬಿಡುಗಡೆಯಾಗಿದ್ದು, ಇದರಲ್ಲಿ ಬಾಹುಬಲಿ ಬೆಟ್ಟದಲ್ಲಿರುವ ಅಕ್ಕಂಗಳ ಬಸದಿಗಳ ನವೀಕರಣ, ಗ್ರಾನೈಟ್ ಹಾಸುವಿಕೆ, ಬೆಟ್ಟದ ಸುತ್ತ ಧರ್ಮದರ್ಶನಕ್ಕಾಗಿ ಪಾಥ್ ವೇ (Path Way) ನಿರ್ಮಾಣ, ನೂತನ ಹಾಸುಕಲ್ಲು ಅಳವಡಿಕೆ ಮತ್ತು ಒಳಾವರಣದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಸರಕಾರದಿಂದ ಬಿಡುಗಡೆಯಾದ 45 ಲಕ್ಷ ರೂ. ಅನುದಾನದಲ್ಲಿ ವೇಣೂರು ಕಲ್ಲು ಬಸದಿಯ ಆವರಣ ತಡೆಗೋಡೆ ಕಾಮಗಾರಿ ನಡೆಸಲಾಗಿದೆ. ಮೆಗಾ ವ್ಯವಸ್ಥೆ: ಭ| ಪಾರ್ಶ್ವನಾಥ ಸ್ವಾಮಿ ಬಸದಿ ಹಾಗೂ ಬಾಹುಬಲಿ ಬೆಟ್ಟದ ಸುತ್ತಲಿನ ಪ್ರದೇಶಗಳು ಮಸ್ತಕಾಭಿಷೇಕಕ್ಕಾಗಿ ಸಜ್ಜುಗೊಳ್ಳುತ್ತಿದೆ. ವಾಹನ ಪಾರ್ಕಿಂಗ್‌ಗಾಗಿ 6 ಕಡೆ ಸಮತಟ್ಟು ನಡೆದಿದೆ. ನೀರಿನ ವ್ಯವಸ್ಥೆಗಾಗಿ ಪ್ರತ್ಯೇಕ ಬೋರ್‌ವೆಲ್ ಕೊರೆಯಲಾಗಿದೆ. 3 ಕಡೆ ಶಾಶ್ವತ ಶೌಚಾಲಯ ನಿರ್ಮಿಸಲಾಗಿದೆ. 1 ಸಾವಿರ ಜನ ಕುಳಿತು ಊಟ ಮಾಡುವ ಭೋಜನ ಶಾಲೆ ಸಿದ್ಧವಾಗುತ್ತಿದೆ. ಬಫೆ ಊಟಕ್ಕೆ ಪ್ರತ್ಯೇಕ ವ್ಯವಸ್ಥೆಯಾಗಲಿದೆ. ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭರತೇಶ ಸಭಾಭವನದಲ್ಲಿ ವ್ಯವಸ್ಥೆಯಾಗುತ್ತಿದ್ದು, 3 ಎಕರೆ ವಿಶಾಲ ಪ್ರದೇಶದಲ್ಲಿ ಮೆಗಾ ವಸ್ತು ಪ್ರದರ್ಶನ ಮಳಿಗೆ ಏರ್ಪಾಡಾಗಲಿದೆ. ಕುಡಿಯುವ ನೀರು, ನಿರಂತರ ಅನ್ನದಾನ, ಶುಚಿತ್ವ, ಪ್ರಥಮ ಚಿಕಿತ್ಸೆ, ಸುಗಮ ಪಾರ್ಕಿಂಗ್‌ಗೆ ಗಮನ ಹರಿಸಲಾಗಿದ್ದು, ಉಪ ಸಮಿತಿಗಳು ಹೊಣೆ ನಿರ್ವಹಿಸಲಿವೆ. ಉತ್ಸವ ವೇಳೆ 24 ಗಂಟೆಯೂ ವಿದ್ಯುತ್ ಪೂರೈಸಲು ಸಚಿವರು ಮೆಸ್ಕಾಂಗೆ ಸೂಚನೆ ನೀಡಿದ್ದಾರೆ.