ಶಿಕ್ಷಕರ ಭಡ್ತಿ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟ - ಫೆ. 13ರಿಂದ ಪ್ರಕ್ರಿಯೆ ಪ್ರಾರಂಭ
Published Date: 11-Feb-2024 Link-Copied
ಬೆಂಗಳೂರು: 2023-24ರ ಸಾಲಿನಲ್ಲಿ ರಾಜ್ಯದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಮತ್ತು ಮುಖ್ಯ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಕೌನ್ಸೆಲಿಂಗ್ ಮೂಲಕ ಭಡ್ತಿ ನೀಡುವ ಪ್ರಕ್ರಿಯೆಯ ವೇಳಾಪಟ್ಟಿ ಪ್ರಕಟಿಸಲಾಗಿದೆ. ಫೆ. 13ರಿಂದ 26ರ ವರೆಗೆ ಈ ಭಡ್ತಿ ಪ್ರಕ್ರಿಯೆ ನಡೆಯಲಿದೆ. ಫೆ. 13ರಂದು ಭಡ್ತಿಗೆ ಪರಿಗಣಿಸಬೇಕಾದ ಖಾಲಿ ಹುದ್ದೆಗಳ ಪ್ರಕಟನೆ, ಫೆ. 14ರಂದು ಭಡ್ತಿಗೆ ಅರ್ಹರಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ಮುಖ್ಯ ಶಿಕ್ಷಕರ 1:2 ಅಂತಿಮ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟನೆ, ಫೆ. 16ರಂದು ಅಂಗವಿಕಲ ಶಿಕ್ಷಕರ ವೈದ್ಯಕೀಯ ಪ್ರಮಾಣ ಪತ್ರದ ಆಧಾರದಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜಾತಿ ಪ್ರಮಾಣ ಪತ್ರದ ಆಧಾರದಲ್ಲಿ ಅಂತಿಮ ಆದ್ಯತಾ ಪಟ್ಟಿಯಲ್ಲಿ ಭಡ್ತಿ ಮೀಸಲಾತಿಗೆ ಬಿಂದು ಮತ್ತು ರೋಸ್ಟರ್ ಗುರುತಿಸುವಿಕೆಯ ಕ್ರಮವನ್ನು ಅಂತಿಮಗೊಳಿಸುವುದು ಹಾಗೂ ಜಿಲ್ಲಾ ಹಂತದಲ್ಲಿ ಇಲಾಖಾ ಭಡ್ತಿ ಸಮಿತಿ ಸಭೆಯನ್ನು ನಡೆಸಿ ಭಡ್ತಿಗೆ ಅರ್ಹರಿರುವ ಶಿಕ್ಷಕರ ಪಟ್ಟಿಗೆ ಅನುಮೋದನೆ ನೀಡುವುದು. ಫೆ. 15 ರಿಂದ 17ರವರೆಗೆ ಅಂತಿಮ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಶಿಕ್ಷಕರಿಗೆ/ಮುಖ್ಯ ಶಿಕ್ಷಕರಿಗೆ ಅವಕಾಶ ಕಲ್ಪಿಸುವುದು, ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮಗೊಳಿಸಿ ಇತ್ಯರ್ಥಪಡಿಸಲು ದಿನಾಂಕ ಫೆ. 19 ನಿಗದಿಪಡಿಸಿದೆ. ಫೆ. 20ರಂದು ಭಡ್ತಿ ಕೌನ್ಸೆಲಿಂಗ್‌ಗೆ ಅರ್ಹರಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ಮುಖ್ಯ ಶಿಕ್ಷಕರ 1:1 ಅಂತಿಮ ಜೇಷ್ಠತಾ ಪಟ್ಟಿ ಪ್ರಕಟನೆ, ಫೆ. 26ರಂದು ಮುಖ್ಯ ಶಿಕ್ಷಕ ವೃಂದದಿಂದ ಹಿರಿಯ ಮುಖ್ಯ ಶಿಕ್ಷಕ ವೃಂದಕ್ಕೆ ಭಡ್ತಿ ಕೌನ್ಸೆಲಿಂಗ್, ಫೆ. 26ರಂದು ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಮುಖ್ಯ ಶಿಕ್ಷಕರ ವೃಂದಕ್ಕೆ ಭಡ್ತಿ ಕೌನ್ಸೆಲಿಂಗ್‌ಗೆ ದಿನ ನಿಗದಿಪಡಿಸಲಾಗಿದೆ. ಭಡ್ತಿ ಪ್ರಕ್ರಿಯೆಯನ್ನು ಯಾವುದೇ ಅಡೆತಡೆಗಳಿಲ್ಲದೆ ಯಾವುದೇ ಲೋಪವಾಗದಂತೆ ಸಾಂಗವಾಗಿ ನಡೆಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ಸರಕಾರಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ. ರೋಸ್ಟರ್ ಪದ್ಧತಿಯ ಬಿಂದು ಗುರುತಿಸುವಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳುವಂತೆಯೂ ಆಯುಕ್ತರು ವಿಶೇಷ ಸೂಚನೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.