Thu, May 1, 2025
ಪೇಟಿಎಂ ಮೇಲೆ ಆರ್.ಬಿ.ಐ. ನಿರ್ಬಂಧ; ಇಕ್ಕಟ್ಟಿನಲ್ಲಿ ಗ್ರಾಹಕರು
ʼಪೇಟಿಎಂ ಕರೋʼ ಅನ್ನುತ್ತಲೇ ಕೋಟ್ಯಾಂತರ ಜನರ ದೈನಂದಿನ ವ್ಯವಹಾರಗಳ ಭಾಗವಾಗಿದ್ದ, ಡಿಜಿಟಲ್ ಬ್ಯಾಂಕಿಂಗ್ ಕ್ಷೇತ್ರದ ದೈತ್ಯ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಈಗ ಬ್ಯಾಂಕಿಂಗ್‌ನ ಕಾನೂನುಗಳನ್ನು ಉಲ್ಲಂಘನೆ ಮಾಡಿರುವ ಕಾರಣಕ್ಕೆ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆಯಡಿ ಆರ್.ಬಿ.ಐ.ಯು ಫೆ. 29ರಿಂದ ಪೇಟಿಎಂನ ಕೆಲವೊಂದು ವ್ಯವಹಾರಗಳ ಮೇಲೆ ನಿರ್ಬಂಧ ಹೇರಿದೆ. ಈ ನಿರ್ಬಂಧದಿಂದಾಗಿ ಗ್ರಾಹಕರಲ್ಲಿ ಗೊಂದಲವುಂಟಾಗಿದ್ದು, ಈಗಾಗಲೇ ಹಲವರು ಪೇಟಿಎಂ ಅಪ್ಲಿಕೇಷನ್ ಅನ್ನು ಮೊಬೈಲ್‌ನಿಂದ ಡಿಲೀಟ್ ಮಾಡಿದ್ದಾರೆ. ಈ ಗೊಂದಲದಿಂದಾಗಿ ಷೇರು ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿರುವ ಪೇಟಿಎಂ ಹೂಡಿಕೆದಾರರಲ್ಲೂ ಆತಂಕ ಮೂಡಿಸಿದೆ. ಅಷ್ಟೇ ಅಲ್ಲದೆ ಈ ನಿರ್ಬಂಧ, ರಾಜಕೀಯ ಪಕ್ಷಗಳ ಕೆಸರೆರೆಚಾಟಕ್ಕೂ ಕಾರಣವಾಗಿದೆ. ಅಷ್ಟಕ್ಕೂ ಏನು ನಿರ್ಬಂಧ...? ಯಾಕೆ ಗೊಂದಲ...? * ಆರ್.ಬಿ.ಐ. ನಿರ್ಬಂಧ ಹೇರಿರುವುದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಮಾತ್ರ. ಆದರೆ ಮೊಬೈಲ್‌ನಲ್ಲಿ ಬಳಸುವ ಪೇಟಿಎಂ ಅಪ್ಲಿಕೇಷನ್‌ಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ. * ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಲಿಂಕ್ ಆಗಿರುವ ಯುಪಿಐ ಐಡಿಗಳಿಂದ ಫೆ. 29ರ ವರೆಗೆ ಮಾತ್ರ ವಹಿವಾಟು ನಡೆಸಬಹುದು. ಇತರ ಬ್ಯಾಂಕ್ ಖಾತೆ ಹೊಂದಿರುವವರು ಫೆ. 29ರ ಬಳಿಕವೂ ಪೇಟಿಎಂ ಬಳಸಿ ವ್ಯವಹಾರ ನಡೆಸಬಹುದು. * ಪೇಟಿಎಂನ ಇತರ ಯುಪಿಐ ಸೇವೆಗಳಿಗೆ ನಿರ್ಬಂಧ ಯಾವುದೇ ಇಲ್ಲ. ಅಂದರೆ ಪೇಟಿಎಂ ಮೂಲಕ ಯುಪಿಐ ಪೇಮೆಂಟ್ ಮಾಡಬಹುದು. * ಪೇಟಿಎಂ ವಹಿವಾಟು ಫೆ. 29ರ ವರೆಗೆ ಎಂದಿನಂತೆ ಇರುತ್ತದೆ. ಫೆ. 29ರ ಬಳಿಕ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಹೊಸ ಖಾತೆಯನ್ನು ತೆರೆಯಲು, ಹೊಸ ಡೆಪಾಸಿಟ್, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿರುವ ತಮ್ಮ ಬ್ಯಾಲೆನ್ಸ್ ಅನ್ನು ಯುಪಿಐ ಮೂಲಕ ವರ್ಗಾವಣೆ, ಕ್ರೆಡಿಟ್ ವಹಿವಾಟು ನಡೆಸುವುದು ಅಥವಾ ಟಾಪ್‌ಅಪ್ ತೆಗೆದುಕೊಳ್ಳುದಕ್ಕೂ ಆರ್.ಬಿ.ಐ. ನಿರ್ಬಂಧ. * ಈಗಾಗಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ವ್ಯಾಲೆಟ್, ಫಾಸ್ಟ್‌ಟ್ಯಾಗ್ ಹಣ ಇದ್ದರೆ ಬಳಕೆ ಮುಂದುವರೆಸಬಹುದು. ಫಾಸ್ಟ್‌ಟ್ಯಾಗ್‌ನಲ್ಲಿ ಹಣ ಇದ್ದರೆ ನಿಮ್ಮ ಖಾತೆಗೂ ವರ್ಗಾಯಿಸಬಹುದು. ಆದರೆ ಫೆ. 29ರ ನಂತರ ಪ್ರಿಪೇಯ್ಡ್ ಸೇವೆಗಳಾದ ವ್ಯಾಲೆಟ್ ಮತ್ತು ಫಾಸ್ಟ್‌ಟ್ಯಾಗ್‌ಗಳಲ್ಲಿ ಠೇವಣಿಗಳನ್ನು ಸ್ವೀಕರಿಸುವಂತಿಲ್ಲ. * ಪೇಟಿಎಂನ ಮಾಲೀಕ ಸಂಸ್ಥೆಯಾದ ವನ್97 ಕಮ್ಯೂನಿಕೇಷನ್ಸ್ ಮತ್ತು ಪೇಟಿಎಂ ಪೇಮೆಂಟ್ಸ್ ಸರ್ವೀಸಸ್‌ನ ನೋಡಲ್ ಅಕೌಂಟ್‌ಗಳನ್ನು ನಿಲ್ಲಿಸುವಂತೆ ಆರ್.ಬಿ.ಐ. ನಿರ್ದೇಶನ ನೀಡಿದೆ. ಗೂಗಲ್ ಪೇ, ಫೋನ್ ಪೇ ಕೇವಲ ಪೇಮೆಂಟ್ ಅಪ್ಲಿಕೇಷನ್‌ಗಳಾಗಿದ್ದು, ಪೇಟಿಎಂ ಪಿ.ಪಿ.ಬಿ.ಎಲ್. ಮೂಲಕ ಬ್ಯಾಂಕಿಂಗ್ ಸೌಲಭ್ಯ ನೀಡುತ್ತಿರುವ ಸಂಸ್ಥೆಯಾಗಿದೆ. ಈ ನಿರ್ಬಂಧದಿಂದಾಗಿ ಪೇಟಿಎಂ ಕೇವಲ ಪೇಮೆಂಟ್ ಅಪ್ಲಿಕೇಷನ್ ಆಗಿ ಉಳಿದುಬಿಡಬಹುದು. ಅಲ್ಲದೆ ಪೇಟಿಎಂ ಸ್ಥಾನವನ್ನು ಉಳಿದ ಪೇಮೆಂಟ್ ಅಪ್ಲಿಕೇಷನ್‌ಗಳು ಹೆಚ್ಚಿನ ಸೌಲಭ್ಯ ನೀಡುವುದರ ಮೂಲಕ ಆಕ್ರಮಿಸಿಕೊಳ್ಳಬಹುದು.