ವೇಣೂರು: ಮಹಾಮಸ್ತಕಾಭಿಷೇಕಕ್ಕೆ ವಿವಿಧ ಮೂಲಗಳಿಂದ ಅನುದಾನ, ಭರದಿಂದ ಸಾಗುತ್ತಿರುವ ಅಭಿವೃದ್ಧಿ ಕಾರ್ಯ
Published Date: 18-Jan-2024 Link-Copied
ಬೆಳ್ತಂಗಡಿ ತಾಲೂಕಿನ ವೇಣೂರಿನ ಭ| ಶ್ರೀ ಬಾಹುಬಲಿ ಸ್ವಾಮಿಯ ವೈಭವದ ಮಹಾಮಸ್ತಕಾಭಿಷೇಕಕ್ಕೆ ಇನ್ನು ಕೆಲವೇ ದಿನಗಳ ಅಂತರವಿದ್ದು, 12 ವರುಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ನಾಡಿನ ಜನತೆ ಕಾತುರರಾಗಿದ್ದಾರೆ. ಅಟ್ಟಳಿಗೆಯ ನಿಮಾ೯ಣವು ಭರದಿಂದ ಸಾಗುತ್ತಿದೆ. ಇದರ ಜೊತೆಗೆ ರಾಜ್ಯ ಸರಕಾರದ ಅಲ್ಪಸಂಖ್ಯಾತರ ಇಲಾಖೆಯಿಂದ ಗ್ರಾನೈಟ್, ಇಂಟರ್ಲಾಕ್ ಮತ್ತು ಹಳೆಯ ಹಾಸುಗಲ್ಲಿನ ಬದಲು ಹೊಸ ಹಾಸುಗಲ್ಲುಗಳ ಹೊದಿಕೆ ಹಾಗೂ ಬೆಟ್ಟದ ಎಡ ಮತ್ತು ಬಲ ಬದಿಯಲ್ಲಿರುವ ಬಿನ್ನಾಣಿ ಬಸದಿ ಮತ್ತು ಅಕ್ಕಂಗಳ ಬಸದಿಯ ದುರಸ್ತಿಗೆ 1 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಿರುತ್ತದೆ. ಸ್ವಚ್ಛ ಭಾರತ ಅಭಿಯಾನದಿಂದ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಶೌಚಾಲಯದ ನಿಮಾ೯ಣ, MRPLನ CSR ಫಂಡ್ ಮೂಲಕ ಭಕ್ತಾಧಿಗಳಿಗೆ ಮೂಲಭೂತ ಸೌಕಯ೯ ಒದಗಿಸಲು ತ್ಯಾಗಿನಿವಾಸದ ಬಳಿ ಶೌಚಾಲಯ ಮತ್ತು ಸ್ನಾನಗೃಹದ ನಿಮಾ೯ಣದ ಕೆಲಸವು ನಡೆಯುತ್ತಿದೆ. ಅಲ್ಲದೆ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರ ವಿಶೇಷ ಮುತುವರ್ಜಿಯಿಂದ ಆರ್ಥಿಕ ಇಲಾಖೆಯ ಅನುಮೋದನೆಯೊಂದಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ಧರಾಮಯ್ಯನವರು ಕಲ್ಲು ಬಸದಿಯ ಆವರಣದಲ್ಲಿ ಸಭಾ ಭವನದ ನಿರ್ಮಾಣಕ್ಕೆ ರೂ. 50 ಲಕ್ಷ ಬಿಡುಗಡೆಗೊಳಿಸಿರುತ್ತಾರೆ. ಹಾಗೆಯೇ ಕರ್ನಾಟಕ ಸರಕಾರದ ಸಣ್ಣ ನೀರಾವರಿಯ ಇಲಾಖೆಯಿಂದ 45 ಲಕ್ಷ ರೂ. ಕಲ್ಲು ಬಸದಿಯ ಸನಿಹದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿರುತ್ತಾರೆ. ಮಂಗಳೂರಿನ ಶ್ರೀ ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ಬೆಟ್ಟದ ಹೊರಾಂಗಣಕ್ಕೆ 20 ಸೋಲಾರ್ ದೀಪಗಳ ಅಳವಡಿಕೆಗೆ 2 ಲಕ್ಷ ರೂ.ಗಳನ್ನು ನೀಡಿರುತ್ತಾರೆ. ವಿಶೇಷವಾಗಿ, ಈ ಬಾರಿಯ ಮಹಾಮಸ್ತಕಾಭಿಷೇಕದ ಮನವಿ ಪತ್ರ ಮತ್ತು ಶ್ರೀಮುಖ ಪತ್ರಿಕೆಯನ್ನು ಅವಿಭಜಿತ ದ.ಕ. ಜಿಲ್ಲೆಯ ಪ್ರತಿಯೊಂದು ಮನೆಗೆ ಸಮಿತಿಯ ಸದಸ್ಯರು ಭೇಟಿ ನೀಡಿ ಮಹಾಮಸ್ತಕಾಭಿಷೇಕಕ್ಕೆ ಆಹ್ವಾನಿಸುತ್ತಿದ್ದಾರೆ. ಇದುವರೆಗೆ 1500ಕ್ಕಿಂತಲೂ ಅಧಿಕ ಮನೆಗೆ ಭೇಟಿ ನೀಡಿ ಆಮಂತ್ರಣ ಪತ್ರಿಕೆ ನೀಡಿರುತ್ತಾರೆ. ಮಸ್ತಕಾಭಿಷೇಕ ಸಮಿತಿಯಲ್ಲಿ 30ರಷ್ಟು ವಿವಿಧ ಉಪಸಮಿತಿಗಳನ್ನು ರಚನೆ ಮಾಡಲಾಗಿದ್ದು, ಆ ಸಮಿತಿಗಳ ಸಭೆಯು ಆಗಾಗ ನಡೆಯುತ್ತಿದ್ದು, ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಶ್ರಮಿಸುತ್ತಿದೆ. ಪ್ರತಿಯೊಂದು ಮನೆಯವರು ಕನಿಷ್ಟ ಒಂದು ಕಲಶವನ್ನಾದರೂ ಪಡೆದುಕೊಂಡು ಪುಣ್ಯಭಾಗಿಗಳಾಗಬೇಕಾಗಿ ಸಮಿತಿಯವರು ವಿನಂತಿಸಿರುತ್ತಾರೆ.